ಪುತ್ತಿಗೆ ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ

ಉಡುಪಿ: ಶ್ರೀ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳ ಸಮ್ಮುಖದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಐತಿಹಾಸಿಕ 4 ನೇ ಉಡುಪಿ ಶ್ರೀಕೃಷ್ಣ ಸರ್ವಜ್ಞ ಪೀಠಾರೋಹಣವನ್ನು ಬೆಳಿಗ್ಗೆ 6:10 ಕ್ಕೆ ಏರಿದರು.

ಗುರುವಾರ ಪ್ರಾತಃಕಾಲ 1.30ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಪುತ್ತಿಗೆ ಶ್ರೀಗಳಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಲ್ಲಿಂದ ಜೋಡುಕಟ್ಟೆಗೆ ಆಗಮಿಸಿದ ಅವರು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಅವರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜೊತೆ ಆಕರ್ಷಕ ಟ್ಯಾಬ್ಲೋ ಗಳು ಜನಪದ ಕಲಾ ತಂಡಗಳೂ ಮೆರವಣಿಗೆಗೆ ಮೆರುಗು ನೀಡಿದವು.

ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಪುತ್ತಿಗೆ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಆ ಮೂಲಕ ಪುತ್ತಿಗೆ ಸುಗುಣೇಂದ್ರ ಸ್ವಾಮೀಜಿ ಅವರು ನಾಲ್ಕನೇ ಪರ್ಯಾಯ ಆರಂಭಿಸಿದರು. ಎರಡು ವರ್ಷಗಳ ಕಾಲ ಕೃಷ್ಣನ ಪೂಜಾ ಕೈಂಕರ್ಯ, ಕೃಷ್ಣಮಠದ ಉಸ್ತುವಾರಿಯನ್ನು ಪುತ್ತಿಗೆ ಶ್ರೀ ವಹಿಸಿಕೊಳ್ಳಲಿರುವರು.

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಜ. 18ರಂದು ರಾಜಾಂಗಣದಲ್ಲಿ ಪ್ರಭಾತ್‌ ದರ್ಬಾರ್‌, ಬೆಳಗ್ಗೆ 4ರಿಂದ 5.45ರ ವರೆಗೆ ಮೈಸೂರಿನ ವಿದ್ವಾನ್‌ ಎ. ಚಂದನ್‌ ಕುಮಾರ್‌ ಮತ್ತು ಬಳಗದಿಂದ ವೇಣು ವಾದನ, ಬೆಳಗ್ಗೆ 5.45ರಿಂದ 6.30ರವರೆಗೆ ಕೃಷ್ಣಗೀತಾ ನೃತ್ಯ ರೂಪಕ, ಬೆಳಗ್ಗೆ 6.30ರಿಂದ ದರ್ಬಾರ್‌ ಸಭಾ ಕಾರ್ಯಕ್ರಮ ನಡೆಯಲಿದೆ.

ಸಂಧ್ಯಾ ದರ್ಬಾರ್‌ ಹಿನ್ನೆಲೆಯಲ್ಲಿ ಸಂಜೆ 4ರಿಂದ 5ರ ವರೆಗೆ ಪ್ರಕಾಶ್‌ ದೇವಾಡಿಗ ಮತ್ತು ಬಳಗದಿಂದ ಸ್ಯಾಕೊÕàಪೋನ್‌ ವಾದನ, 5.15ರಿಂದ 7.30ರ ವರೆಗೆ ಸಂಧ್ಯಾ ದರ್ಬಾರ್‌ ಸಭಾ ಕಾರ್ಯಕ್ರಮ, ನಿರಂತರ ಜ್ಞಾನ ಸತ್ರ/ಅಖಂಡ ಗೀತಾ ಪಾರಾಯಣ, ದ್ವೆ„ವಾರ್ಷಿಕ ಅವಿರತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಭಾರ್ಗವಿ ತಂಡದಿಂದ ಸಾಂಸ್ಕೃತಿಕ ಕ್ಷಣ, ಗಣ್ಯರಿಗೆ ಸಮ್ಮಾನ, ಪರ್ಯಾಯ ಪುತ್ತಿಗೆ ಶ್ರೀಪಾದರಿಂದ ಧರ್ಮಸಂದೇಶ ನಡೆಯಲಿದೆ.

ರಾತ್ರಿ 7.30ರಿಂದ 9ರ ವರೆಗೆ ಬೆಂಗಳೂರಿನ ವಿ| ನಿರುಪಮಾ ರಾಜೇಂದ್ರ ಅವರಿಂದ ಭರತನಾಟ್ಯ-ಕೃಷ್ಣ ಕರ್ಣಾಮೃತ, ವ್ಯಾಖ್ಯಾನ: ಶತಾವಧಾನಿ ಡಾ| ಆರ್‌. ಗಣೇಶ್‌ ಅವರಿಂದ.