ಪುತ್ತಿಗೆ ಶ್ರೀಗಳಿಂದ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕೈಂಕರ್ಯ: ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ : ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಡುಪಿಯ ಶ್ರೀಮಂತಿಕೆ ಇಡೀ ವಿಶ್ವಕ್ಕೇ ಮಾದರಿ. ಪುತ್ತಿಗೆ ಶ್ರೀಗಳು ವಿದೇಶಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ, ವಿದೇಶಿಯರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಶ್ರೀ ಪುತ್ತಿಗೆ ಪರ್ಯಾಯೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿ ಪರ್ಯಾಯ ಕಾರ್ಯಕ್ರಮ ನೋಡಿ ನಿಜಕ್ಕೂ ಬೆರಗಾದೆ. ಜಿಲ್ಲೆಯು ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆ ಹೊಂದಿದೆ.

ದಸರಾ ವೈಭವ ನೆನಪಿಸಿದ ಪರ್ಯಾಯ

ಪರ್ಯಾಯೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಹಾಗೂ ಕಾರ್ಯಕ್ರಮವನ್ನು ನೋಡಿದರೆ, ಮೈಸೂರು ದಸರಾದ ವೈಭವ ನನಗೆ ನೆನಪಾಯಿತು. ಇದನೆಲ್ಲಾ ನೋಡಿದರೆ ಸಾಂಸ್ಕೃತಿಕವಾಗಿ ಭಾರತ ಸಾಕಷ್ಟು ಶ್ರೀಮಂತವಾಗಿದೆ. ಭಾರತ ಸಾಂಸ್ಕೃತಿಕವಾಗಿ ವಿಶ್ವಗುರು ಆಗುವ ಪಥದತ್ತ ಸಾಗಿದೆ. ಪರ್ಯಾಯೋತ್ಸವಕ್ಕೆ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದೆ. ಪರ್ಯಾಯ ಕಾರ್ಯಕ್ರಮ ಮುಗಿಯುವವರೆಗೂ ಜಿಲ್ಲಾಡಳಿತ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದರು

ಪರ್ಯಾಯದಲ್ಲಿ ಭಾಗವಹಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯ, ಪುತ್ತಿಗೆ ಪರ್ಯಾಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಪೂರ್ವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ಕುಟುಂಬ ಸಮೇತ ಆಗಮಿಸಿ ಭಾಗವಹಿಸುತ್ತಿದ್ದೇನೆ ಎಂದರು.

ದೇಶದ ಪ್ರಸಿದ್ಧ ತೀರ್ಥಕ್ಷೇತ್ರವಾದ ಉಡುಪಿ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಇಂತಹ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಕೃಷ್ಣನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಪರ್ಯಾಯ ಶ್ರೀ ಕೃಷ್ಣ ಪೂಜಾ ಕೈಂಕರ್ಯ ನೇರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ವಿದೇಶೀ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.