ಪುತ್ತಿಗೆ ಪರ್ಯಾಯ: ಕಟ್ಟಿಗೆ ಮುಹೂರ್ತ ಸಂಪನ್ನ

ಉಡುಪಿ: ಪುತ್ತಿಗೆ ಪರ್ಯಾಯ 2024-26 ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಒಂದಾದ ಕಟ್ಟಿಗೆ ಸಂಗ್ರಹ ಮುಹೂರ್ತವು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಆದೇಶದಂತೆ ಜೂನ್ 26 ರಂದು ಶ್ರೀಕೃಷ್ಣಮಠದ ಕಟ್ಟಿಗೆ ರಥವಿರುವ ಸ್ಥಳದಲ್ಲಿ ಸಂಪನ್ನಗೊಂಡಿತು.

ವಿದ್ವಾನ್ ಹೆರ್ಗ ವೇದವ್ಯಾಸ ಭಟ್ ಹಾಗೂ ರಾಘವೇಂದ್ರ ಕೊಡಂಚರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಪಟ್ಟದ ದೇವರು ಶ್ರೀ ಉಪೇಂದ್ರ ವಿಠಲ ದೇವರಲ್ಲಿ ಫಲನ್ಯಾಸ ಪೂರ್ವಕ ಪ್ರಾರ್ಥನೆ, ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ, ಶ್ರೀಕೃಷ್ಣಮಠದಲ್ಲಿ ಪ್ರಾರ್ಥನೆ, ನವಗ್ರಹ ದಾನವನ್ನು ಈ ಸಂದರ್ಭದಲ್ಲಿ ನಡೆಸಲಾಯಿತು.

ಶ್ರೀಕೃಷ್ಣಮಠದ ಪದ್ಮನಾಭ ಮೇಸ್ತ್ರಿ ನೇತೃತ್ವದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಅಷ್ಟಮಠದ ಪ್ರತಿನಿಧಿಗಳು, ಆನೆಗುಡ್ಡೆ ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀಧರ ಉಪಾಧ್ಯಾಯ, ಕೇಂಜ ಶ್ರೀಧರ ತಂತ್ರಿ, ಬಿ. ಗೋಪಾಲಾಚಾರ್ಯ, ಬ್ರಾಹ್ಮಣ ಸಭೆಯ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೆರೆದ ಗಣ್ಯರಿಗೆ ಸಿದ್ದಿ ತಳಿಯ ವಿಶೇಷ ಹಲಸಿನ ಸಸಿಗಳನ್ನು ವಿತರಿಸಲಾಯಿತು.

ಶ್ರೀಮಠದ ದಿವಾನ ಮುರಳೀಧರ ಆಚಾರ್ಯ, ನಾಗರಾಜ ಆಚಾರ್ಯ, ಶ್ರೀಪಾದರ ಆಪ್ತಕಾರ್ಯದರ್ಶಿಗಳಾದ ಪ್ರಸನ್ನಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.