ಪುತ್ತೂರು: ಪತ್ರಕರ್ತರ ಜೀವನ ಭದ್ರತೆಗಾಗಿ ₹ 34 ಲಕ್ಷ ಮೊತ್ತದ ಯೋಜನೆ ಘೋಷಣೆ

ಪುತ್ತೂರು: ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಪತ್ರಕರ್ತರ ಜೀವನ ಭದ್ರತೆಗಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘವು ತನ್ನ ಸದಸ್ಯರಿಗೆ ₹ 34 ಲಕ್ಷ ಮೊತ್ತದ ಆರ್ಥಿಕ ಯೋಜನೆ ಘೋಷಿಸಿದೆ. ಈ ಯೋಜನೆ ಇಂದಿನಿಂದಲೇ ಅಧಿಕೃತವಾಗಿ ಜಾರಿಗೊಳ್ಳಲಿದೆ.

ಇಂದು ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಈ ಬಗ್ಗೆ ಮಾಹಿತಿ ನೀಡಿದರು.

ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಎಂಬ ವಿನೂತನ ಯೋಜನೆಯಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರ ಹೆಸರಿನಲ್ಲಿ ಸಂಘದ ನೇರ ಹಿಡಿತದಲ್ಲಿ ತಲಾ ₹ 25 ಸಾವಿರ ಬ್ಯಾಂಕ್ ಡೆಪೊಸಿಟ್ ಮಾಡಿ, ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಡೆಪೊಸಿಟ್‌ನ ಪೂರ್ಣ ಪ್ರಮಾಣದ ಲಾಭಾಂಶ ದೊರೆಯಲಿದೆ. ಈ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 23 ಸದಸ್ಯ ಪತ್ರಕರ್ತರು ₹ 34 ಲಕ್ಷ ಮೊತ್ತದ ಆರ್ಥಿಕ ನೆರವು ಪಡೆಯಲಿದ್ದಾರೆ ಎಂದು ಹೇಳಿದರು.

ಕರ್ತವ್ಯ ಸಂದರ್ಭದಲ್ಲಿ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆಯಂತಹ ಘಟನೆ ಸಂಭವಿಸಿದ್ದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ ₹ 20 ಸಾವಿರ ತುರ್ತು ವೈಯಕ್ತಿಕ ಸಾಲ ಪಡೆಯಲು ಅರ್ಹತೆ ನೀಡಲಾಗಿದೆ ಎಂದು ನಾಳ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡ್, ಉಪಾಧ್ಯಕ್ಷ ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಅನೀಶ್ ಕುಮಾರ್ ಮರಿಲ್ ಉಪಸ್ಥಿತರಿದ್ದರು.