ಯಡಿಯೂರಪ್ಪನವರನ್ನು ಕೆಳಗಿಳಿಸಿ, ದಿ. ಸುರೇಶ್ ಅಂಗಡಿಯವರಿಗೆ ಸಿಎಂ ಪಟ್ಟಕಟ್ಟಲು ಎಲ್ಲ ಸಿದ್ಧತೆ ನಡೆದಿತ್ತು: ಲಿಂಗರಾಜ್ ಪಾಟೀಲ್

ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ಸಿಎಂ ಪಟ್ಟ ಕಟ್ಟಲು ಎಲ್ಲ ಸಿದ್ಧತೆ ನಡೆದಿತ್ತು ಎಂದು ಅಂಗಡಿಯವರ ಸೋದರ ಮಾವ ಲಿಂಗರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಹಿಂದೆ ದೆಹಲಿಯಲ್ಲಿ ಕರ್ನಾಟಕದ ಉಸ್ತುವಾರಿಯಾಗಿದ್ದ ಮುರಳೀಧರ್ ರಾವ್ ಅವರ ನೇತೃತ್ವದಲ್ಲಿ ರಹಸ್ಯ ಸಭೆ ನಡೆದಿತ್ತು. ಅದರಲ್ಲಿ ನಾನು ಕೂಡ ಭಾಗಿಯಾಗಿದ್ದೆ ಎಂದು ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಅದೇ ಸಮುದಾಯದ ಬೆಳಗಾವಿ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ಲಿಂಗಾಯುತ ನಾಯಕರಾಗಿದ್ದ ಅಂಗಡಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಚರ್ಚೆ ನಡೆದಿತ್ತು ಎಂದು ಅವರು ಈಗ ಬಾಯಿಬಿಟ್ಟಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ದೊಡ್ಡಮಟ್ಟದ ಕಾರ್ಯತಂತ್ರ ನಡೆದಿತ್ತು. ಅಲ್ಲದೆ ಸಿಎಂ ಕೂಡ ತರಾತುರಿಯಲ್ಲಿ ದೆಹಲಿಗೆ ತೆರಳಿ ನೀಡಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದರು. ಇದೀಗ ಲಿಂಗರಾಜ್ ಪಾಟೀಲ್ ಹೇಳಿಕೆ ಈ ವಿಚಾರಕ್ಕೆ ಪುಷ್ಟಿ ನೀಡುವಂತಿದೆ.

ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ಸೆ. 23ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ನಿಧನದೊಂದಿಗೆ ಸಿಎಂ ಬದಲಾವಣೆ ವಿಚಾರವೂ ಮೂಲೆಗೆ ಸೇರಿತು ಎಂದು ಅವರು ಹೇಳಿದ್ದಾರೆ.