ಹೈದರಾಬಾದ್: ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೂಲ್’ ಚಿತ್ರದ ಚಿತ್ರೀಕರಣ ಭಾನುವಾರ ಆರಂಭವಾಗಿದೆ. ಚಿತ್ರದ ಛಾಯಾಗ್ರಾಹಕ ಕುಬಾ ಬ್ರೋಜೆಕ್ ಅವರು ಇನ್ಸ್ಟಾಗ್ರಾಮ್ನಲ್ಲಿ ಚಿತವ್ವೊಂದನ್ನು ಹಂಚಿಕೊಂಡಿದ್ದಾರೆ. ನಟನಿಗೆ ಧನ್ಯವಾದ ಹೇಳುತ್ತಾ “ಸಾಹಸ ಪ್ರಾರಂಭವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಛಾಯಾಗ್ರಾಹಕ ಚಿತ್ರವನ್ನು ಹಾಕಿದ್ದಾರೆ.
ಚಿತ್ರದಲ್ಲಿ ಅಲ್ಲು ಅರ್ಜುನ್ ದಪ್ಪನಾದ ಗಡ್ಡ ಹೊಂದಿದ್ದು, ಸಾದಾ ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿರಸಿಕರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ನಿಜವಾದ ಕಥೆ ಇರುವುದೇ ದಿ ‘ರೂಲ್’ ನಲ್ಲಿ ಎಂದು ನಿರ್ದೇಶಕ ಸುಕುಮಾರ್ ತಿಳಿಸಿದ್ದಾರೆ. ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಫಹಾದ್ ಫಾಸಿಲ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
‘ಪುಷ್ಪ 2’ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಲನಚಿತ್ರ ನಿರ್ಮಾಪಕರು ಆಗಸ್ಟ್ನಲ್ಲಿ ಬಹಿರಂಗಪಡಿಸಿದರು. ಸುಕುಮಾರ್ ನಿರ್ದೇಶನದ ಚಿತ್ರ, ‘ಪುಷ್ಪ: ದಿ ರೈಸ್’ ಕಳೆದ ವರ್ಷ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತ್ತು.
ಮುತ್ತಂಶೆಟ್ಟಿ ಮೀಡಿಯಾ ಸಹಯೋಗದೊಂದಿಗೆ, ಮೈತ್ರಿ ಮೂವೀ ಮೇಕರ್ಸ್ನ ವೈ ರವಿಶಂಕರ್ ಮತ್ತು ನವೀನ್ ಯೆರ್ನೇನಿ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.