ನಾಳೆ(ಎ.9) ಪ್ರಕಟವಾಗಲಿದೆ ಪಿಯುಸಿ ಫಲಿತಾಂಶ !

ಬೆಂಗಳೂರು, : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ, ಏಪ್ರಿಲ್ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆ, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.

ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯದ 1,217 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ತಮ್ಮ ಅಂಕಗಳಿಗೆ ತೃಪ್ತರಾಗದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಇದೇ ವೇಳೆ, ಸ್ಕ್ಯಾನ್ ಮಾಡಿದ ಉತ್ತರಪತ್ರಿಕೆ ಹಾಗೂ ಮರು ಎಣಿಕೆಗಾಗಿ ಅರ್ಜಿ ಪ್ರಕ್ರಿಯೆಯ ದಿನಾಂಕಗಳನ್ನು ಫಲಿತಾಂಶದ ನಂತರ ಪ್ರಕಟಿಸಲಾಗುತ್ತದೆ.

ಎಲ್ಲೆಲ್ಲಿ ಪ್ರಕಟ?
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ “ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026” ಲಿಂಕ್ ಕ್ಲಿಕ್ ಮಾಡಿ, ನೋಂದಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸಿ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು. ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಕೂಡ ಪಡೆಯಬಹುದಾಗಿದೆ.