ಬೆಂಗಳೂರು: ಗೋಶಾಲೆಗಳಿಂದ ಜಾನುವಾರುಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಜುಲೈ 28 ರಂದು ಹಸು ದತ್ತು ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಭಮಲಾ ಚವ್ಹಾಣ್ ಹೇಳಿದ್ದಾರೆ.
”ಜಾನುವಾರುಗಳನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿ ಅವುಗಳನ್ನು ಸಾಕುವ ಮತ್ತು ಪೋಷಣೆ ಮಾಡುವ ಉದ್ದೇಶದಿಂದ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ದೇಶದಲ್ಲೇ ಪ್ರಥಮ ಬಾರಿಗೆ ‘ಪುಣ್ಯಕೋಟಿ ದತ್ತು ಯೋಜನೆ’ ಆರಂಭಿಸಲು ಉತ್ಸುಕವಾಗಿದೆ” ಎಂದು ಅವರು ಹೇಳಿದ್ದಾರೆ.
ಜುಲೈ 28ಕ್ಕೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಅದೇ ದಿನ ಲೋಕಾರ್ಪಣೆ ಸಮಾರಂಭ ನಡೆಯಲಿದೆ. 100 ಸರಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಸೀ ಮತ್ತು ಮಿಶ್ರತಳಿ ಜಾನುವಾರು, ನಿರ್ಗತಿಕ, ದಣಿದ, ವೃದ್ಧ, ರೋಗಗ್ರಸ್ತ, ರೈತರಿಂದ ಕೈಬಿಟ್ಟ ಹಸು, ಗಂಡು ಕರುಗಳು ಮತ್ತು ನ್ಯಾಯಾಲಯ ಮತ್ತು ಪೊಲೀಸ್ ಕಸ್ಟಡಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.