ಪಂಜಾಬ್ ನಲ್ಲೊಬ್ಬ ‘ಪಿಎಚ್‌ಡಿ ಸಬ್ಜಿ ವಾಲಾ’: ಅಧ್ಯಾಪನ ವೃತ್ತಿಗೆ ತಿಲಾಂಜಲಿ ಇತ್ತು ತರಕಾರಿ ಮಾರುತ್ತಿರುವ ಪ್ರಾಧ್ಯಾಪಕ!

ಅಮೃತಸರ್: ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರುತ್ತಿದ್ದಾರೆ.

39 ವರ್ಷದ ಡಾ. ಸಂದೀಪ್ ಸಿಂಗ್ 11 ವರ್ಷಗಳ ಕಾಲ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಅವರು ಕಾನೂನಿ ವಿಷಯದಲ್ಲಿ ಪಿಎಚ್‌ಡಿ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಮತ್ತು ಇನ್ನೂ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.

ಸಂಬಳ ಕಡಿತ ಮತ್ತು ಅನಿಯಮಿತ ವೇತನದಂತಹ ಅಡೆತಡೆಗಳನ್ನು ಎದುರಿಸಿದ ನಂತರ ಅವರು ತಮ್ಮ ಕೆಲಸಕ್ಕೆ ತಿಲಾಂಜಲಿ ನೀಡಿದ್ದಾರೆ.

“ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಮತ್ತು ಆಗಾಗ ಸಂಬಳ ಕಡಿತವಾಗುತ್ತಿದ್ದ ಕಾರಣ ನಾನು ಕೆಲಸ ಬಿಡಬೇಕಾಯಿತು. ಆ ಕೆಲಸದಿಂದ ಜೀವನ ನಡೆಸುವುದು ನನಗೆ ಕಷ್ಟವಾಯಿತು. ಅದಕ್ಕಾಗಿಯೇ ನನ್ನ ಮತ್ತು ನನ್ನ ಕುಟುಂಬದ ಉಳಿವಿಗಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದೇನೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ತನ್ನ ತರಕಾರಿ ಬಂಡಿ ಮತ್ತು “ಪಿಎಚ್‌ಡಿ ಸಬ್ಜಿ ವಾಲಾ” ಎಂಬ ಬೋರ್ಡ್‌ನೊಂದಿಗೆ, ಡಾ. ಸಂದೀಪ್ ಸಿಂಗ್ ಪ್ರತಿದಿನ ತರಕಾರಿ ಮಾರಲು ಮನೆ ಮನೆಗೆ ಹೋಗುತ್ತಾರೆ. ತಮ್ಮ ಕರ್ತವ್ಯ ಮುಗಿದ ಬಳಿಕ ಮನೆ ಸೇರುವ ಅವರು ಮತ್ತೆ ಕಲಿಯುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ.

ಅಧ್ಯಾಪನ ವೃತ್ತಿಗೆ ಬ್ರೇಕ್ ಹಾಕಿದ್ದರೂ ಡಾ.ಸಂದೀಪ್ ಸಿಂಗ್ ತಮ್ಮ ಉತ್ಸಾಹವನ್ನು ಬಿಟ್ಟಿಲ್ಲ. ಹಣ ಉಳಿಸಿ ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ತೆರೆಯುವ ಹಂಬಲ ಅವರದ್ದಾಗಿದೆ.