‘ನಟ ಸಾರ್ವಭೌಮ’ ಅಪ್ಪು ಆಕ್ಟಿಂಗ್, ಡ್ಯಾನ್ಸಿಂಗ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು. ಇದೇ ಮೊದಲ ಬಾರಿಗೆ ಹಾರರ್-ಸಸ್ಪೆನ್ಸ್ ಅಂಶಗಳಿರುವ ಚಿತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ.   ನಟ ಸಾರ್ವಭೌಮ ರಿಲೀಸ್ ಆಗಿ, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಪ್ಪು ಆಕ್ಟಿಂಗ್, ಡ್ಯಾನ್ಸಿಂಗ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.

ಭೂತ, ಆತ್ಮಗಳ ಕಥೆಗಳುಳ್ಳ ಸಿನಿಮಾಗಳನ್ನು ಮಾಡುವುದು ಈಗಿನ ಸಂದರ್ಭದಲ್ಲಿ ಮೂಢನಂಬಿಕೆಯನ್ನು ಪೋಷಿಸಿದಂತೆಯೇ. ಆದರೆ ಬುದ್ಧಿವಂತ ನಿರ್ದೇಶಕನೊಬ್ಬ ಇಂತಹ ಕಥೆಯನ್ನು ಇಟ್ಟುಕೊಂಡು ತರ್ಕವನ್ನು ಮೀರದೆ ಒಂದು ಸಹಜ ಕಥೆಯನ್ನು ಹೇಳಬಹುದು ಎನ್ನುವುದಕ್ಕೆ ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಸಿನಿಮಾ ಸಾಕ್ಷಿಯಾಗಿದೆ.

   ಪುನೀತ್ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಾಗ ನಿರೀಕ್ಷೆಯ ಜತೆಗೆ ಕುತೂಹಲ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿತ್ತು. ನಟಸಾರ್ವಭೌಮ ಸಿನಿಮಾ ಕಥೆ ಒಂದು ಸಾಮಾನ್ಯ ಸೇಡಿನ ಕಥೆಯಾಗಿದೆ. ಆ ಸೇಡನ್ನು ಯಾರು ಯಾರ ಮೇಲೆ ತೀರಿಸಿಕೊಳ್ಳುತ್ತಾರೆ ಎಂಬುದೇ ಸ್ಕ್ರೀನ್ ಪ್ಲೇ. ಇದೊಂದು ಸೇಡಿನ ಕಥೆಯಾದರೂ ಅದನ್ನು ತೀರಿಸಿಕೊಳ್ಳುವ ಬಗೆಯನ್ನು ಸ್ವಲ್ಪ ವಿಭಿನ್ನವಾಗಿ, ಪ್ರೇಕ್ಷಕನಿಗೆ ಥ್ರಿಲ್ ಆಗುವಂತೆ ಹೇಳುವ ಮೂಲಕ ನಿರ್ದೇಶಕ ಪವನ್ ಒಡೆಯರ್ ಚಾಕಚಕ್ಯತೆ ತೋರಿಸಿದ್ದಾರೆ.