ಉಡುಪಿ: ಮಹಿಳೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಮತ್ತು ಚಿನ್ನದ ಸರವನ್ನು ಸುಲಿಗೆ ಮಾಡಿದ ಆರೋಪಿಗೆ ಉಡುಪಿ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪ್ರಕರಣದ ವಿವರ:
2015 ನವೆಂಬರ್ 13 ರಂದು ಪ್ರಶಾಂತ್ ಶೆಟ್ಟಿ ಎಂಬಾತನು ಉಡುಪಿ ತಾಲೂಕು ಪೆರ್ಣಂಕಿಲ ಗ್ರಾಮದ ಗುಂಡುಪಾದೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ಜಲಜಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 41 ಗ್ರಾಂ ತೂಕದ ಕರಿಮಣಿ ಮತ್ತು ಚಿನ್ನದ ಸರವನ್ನು ಸುಲಿಗೆ ಮಾಡಿರುವ ಹಿನ್ನೆಲೆ, ಹಿರಿಯಡ್ಕ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿ ಪ್ರಶಾಂತ್ ಶೆಟ್ಟಿಗೆ ಭಾ.ದಂ.ಸಂ. ಕಲಂ 392 ರಡಿ 1 ವರ್ಷ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾಧಾರಣಾ ಶಿಕ್ಷೆಯನ್ನು ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ವಾದ ಮಂಡಿಸಿರುತ್ತಾರೆ.