ನಟ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಮೋಘವರ್ಷ ನಿರ್ದೇಶನದ ಸಾಕ್ಷ್ಯಚಿತ್ರ ಅಕ್ಟೋಬರ್ 28 ರಂದು ತೆರೆ ಮೇಲೆ ಬರಲಿದೆ. ಬಿಡುಗಡೆ ದಿನಾಂಕದ ಅಧಿಕೃತ ಪ್ರಕಟಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. “ತನ್ನ ಮೇಲೆ ಅಪಾರ ಪ್ರೀತಿಯನ್ನು ಧಾರೆಯೆರೆದ ಭೂಮಿಗೆ ಗೌರವವಾಗಿ ಕರ್ನಾಟಕದ ಕಾಡುಗಳನ್ನು ಪುನೀತ್ ಆಗಿಯೇ ಅನ್ವೇಷಿಸುತ್ತಾರೆ. ಈ ಚಿತ್ರದಲ್ಲಿ ಚಿತ್ರಕಥೆಯಿಲ್ಲದ ನೈಜ ಪುನೀತ್ ಅವರನ್ನು ಅಭಿಮಾನಿಗಳು ಕಾಣಬಹುದು” ಎಂದು ಅಶ್ವಿನಿ ಹೇಳಿದ್ದಾರೆ.
ಅಕ್ಟೋಬರ್ 9 ರಂದು ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ.
ಈ ಚಿತ್ರವು ಪುನೀತ್ ಅವರ ನೈಜ ಪಾತ್ರವನ್ನು ಹೊಂದಿದೆ ಮತ್ತು ಕರ್ನಾಟಕದ ಉದ್ದಗಲಕ್ಕೂ ಇದನ್ನು ಚಿತ್ರೀಕರಿಸಲಾಗಿದೆ. ಇದು ಅಪ್ಪು ಜೊತೆಗಿನ ಅತ್ಯಂತ ವಿನಮ್ರ ಮತ್ತು ಭವ್ಯ ಅನುಭವವಾಗಿದೆ ಎಂದು ನಿರ್ದೇಶಕ ಅಮೋಘವರ್ಷ ಹೇಳಿದ್ದಾರೆ.
ರಾಜ್ಯದ ಕಾಡುಗಳು, ಕಡಲತೀರಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಸಿನಿರಸಿಕರಿಗೆ ಉಣಬಡಿಸುವ ಈ ಚಿತ್ರ ಪುನೀತ್ ಅವರ ಕನಸಿನ ಕೂಸು. ವಿಶೇಷವೆಂದರೆ, ಅಕ್ಟೋಬರ್ 27 ರಂದು, ಅವರ ಸಾವಿನ ಎರಡು ದಿನಗಳ ಮೊದಲು, ಪುನೀತ್ ಗಂಧದ ಗುಡಿ ತಮ್ಮ ಕನಸಿನ ಯೋಜನೆ ಎಂದು ಟ್ವೀಟ್ ಮಾಡಿದ್ದರು.
ಈ ಚಿತ್ರವನ್ನು ಹೊರಾಂಗಣದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಪುನೀತ್ ಅವರ ಧ್ವನಿಯನ್ನು ಒಳಗೊಂಡಿರುತ್ತದೆ, ಇದು ನಟನಿಗೆ ದೊರಕಿದ ಸೂಕ್ತವಾದ ಗೌರವ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.