ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಅರಮನೆ ಮೈದಾನದಲ್ಲಿ ಪುನೀತ ಪರ್ವ: ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸುವ ನಿರೀಕ್ಷೆ

ಅಪ್ಪು ಕಣ್ಮರೆಯಾಗಿ ಒಂದು ವರ್ಷವಾಗುತ್ತಾ ಬಂದಿದ್ದು, ಅವರ ಪುಣ್ಯ ಸ್ಮರಣೆಯ ಒಂದು ದಿನಕ್ಕೂ ಮುನ್ನ ಅಕ್ಟೋಬರ್‌ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.

ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನೈಜ ಜೀವನದ ಪುನೀತ್ ರಾಜ್‍ಕುಮಾರ್ ಆಗಿ ಅಪ್ಪು ಕಾಣಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ  ಅರಮನೆ ಮೈದಾನದಲ್ಲಿ ಅಕ್ಟೋಬರ್ 21ರ ಶುಕ್ರವಾರ ಚಿತ್ರದ ಬಿಡುಗಡೆ ಪೂರ್ವ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ.

ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಭಾರತೀಯ ಚಿತ್ರರಂಗದ ನಟ- ನಟಿಯರಿಗೂ ಆಹ್ವಾನ ನೀಡಲಾಗಿದೆ.

ಮಂಗಳವಾರ ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್, ಚಿರಂಜೀವಿ, ಸೂರ್ಯ ಮೊದಲಾವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ ವಾರ ‘ಗಂಧದ ಗುಡಿ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ನಿಸರ್ಗದ ರುದ್ರ ರಮಣೀಯ ಚಿತ್ರಗಳನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.