ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದವರ ಬಣ್ಣ ಬಯಲಾಗಿದೆ: ಪ್ರಧಾನಿ ಮೋದಿ

ಗುಜರಾತ್‌: ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದವರ ಬಣ್ಣ ಬಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಏಕತಾ ದಿನದ ಅಂಗವಾಗಿ ಗುಜರಾತಿನ ಕೆವಾಡಿಯಾದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಇಂತಹ ಸಮಯದಲ್ಲೇ ಕೆಲ ವ್ಯಕ್ತಿಗಳು ಕೊಳಕು ರಾಜಕೀಯಕ್ಕೆ ಮುಂದಾಗಿದ್ದರು ಎಂದು ವಿರೋಧ ಪಕ್ಷಗಳ ವಿರುದ್ಧ ಗುಡುಗಿದರು.

ಪುಲ್ವಾಮ ದಾಳಿಯ ನಂತರ ಕೆಲವರು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದನ್ನು ಈ ದೇಶದ ಜನ ಇನ್ನೂ ಮರೆತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದವರ ಬಣ್ಣ ಈಗ ಬಯಲಾಗಿದೆ ಎಂದು ಮೋದಿ ಟೀಕಿಸಿದರು.