ಬೆಂಗಳೂರು: ಕನ್ನಡದ ಸುದ್ದಿ ವಾಹಿನಿಯೊಂದು ತನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ನನ್ನ ತೇಜೋವಧೆ ಮಾಡಿದೆ ಎಂದು ನಟ ರಕ್ಷಿತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ನಿಮ್ಮದು ’ಟಿಆರ್ ಪಿ’ ಗೋಸ್ಕರ ಇರುವ ನ್ಯೂಸ್ ಚಾನೆಲ್. ಅದೇ ನಿಮ್ಮ ಅಸ್ತ್ರ. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗೂ ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ’ ಎಂದು ವಾಹಿನಿಯ ವಿರುದ್ಧ ಗುಡುಗಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡಾ 90 ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇರುವರು. ಬಿಟ್ಟು ಹೋದವರು ನನ್ನಿಂದ ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆ ಹೊರತು ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೇನೆ. ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೇನೆ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಪರೇಟರ್ ನಿಂದ ಹಿಡಿದು ಟೆಕ್ನಿಷಿಯನ್ ಡೈರೆಕ್ಟರ್ ಹಾಗೂ ಪ್ರತಿಯೊಬ್ಬ ಪ್ರೊಡ್ಯೂಸರ್ ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲಿಯೂ ಮಾತಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಾಗಂತ ನಿಜ ಸುಳ್ಳಾಗಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಪಬ್ಲಿಕ್ ಟಿವಿ’ಯವರು ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮ ಮಾಡಿದ್ದಾರೆ. ನಾನು ಈ ಎಲ್ಲ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷ್ಯಿಸುತ್ತ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ, ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು ಮಾಧ್ಯಮದ ನೈತಿಕ ಜವಾಬ್ದಾರಿಯನ್ನು ಮರೆತು ವೈಯಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ.
ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ. ಆದರೆ, 10 ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು ನನ್ನ ಕೆಲಸದ ಕುರಿತು ಯಾವ ಯಾವ ಸತ್ಯ ಹೊರ ಬರುತ್ತದೋ ಅದಕ್ಕೆ ಸಂಬಂಧಪಟ್ಟವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ.
ನನ್ನ ಉತ್ತರ ಜುಲೈ 11 ರಂದು. ಕಾದು ನೋಡಿ. ‘Truth is mighty And must prevail’ ಎಂದು ಟ್ವೀಟ್ ಮಾಡುವ ಮೂಲಕ ಪಬ್ಲಿಕ್ ಟಿವಿ ವಾಹಿನಿಗೆ ಸವಾಲು ಹಾಕಿದ್ದಾರೆ.