ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿ ಪ್ರದೇಶದಲ್ಲಿ ಸೋಮವಾರ ಮಣ್ಣು ಕುಸಿಯುತ್ತಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಂತೆಕಟ್ಟೆ ಪ್ರದೇಶದಲ್ಲಿ ಆರಂಭಗೊಂಡಿರುವ ಅಂಡರ್ ಪಾಸ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮಣ್ಣು ಕುಸಿಯಲು ಆರಂಭವಾಗಿದ್ದು, ಈ ಕಾರಣದಿಂದ ಅಲ್ಲಿ ನಿರ್ಮಿಸಲಾಗಿರುವ ತಡೆಗೋಡೆಗಳಿಗೂ ಹಾನಿಯಾಗಿದೆ. ಅಷ್ಟು ಮಾತ್ರವಲ್ಲದೆ, ಮಣ್ಣು ಕುಸಿತ ಹೆಚ್ಚಾಗುತ್ತಿದ್ದು ಅದರಿಂದಾಗಿ ಪಕ್ಕದಲ್ಲೇ ಇರುವ ಬೃಹತ್ ಕಟ್ಟಡಗಳ ನಿವಾಸಿಗಳಲ್ಲಿ ಆತಂಕ ಮೂಡಿದೆ.
ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗದಲ್ಲಿಯೂ ಕೂಡಾ ಸರಿಯಾದ ಡಾಮರೀಕರಣ ಇಲ್ಲದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂತೆಕಟ್ಟೆ ಬಳಿ ಕಾಮಗಾರಿ ಹಂತದಲ್ಲಿರುವ ಅಂಡರ್ ಪಾಸ್ ಕಾಮಗಾರಿಯ ಬೃಹತ್ ಹೊಂಡ ಕುಸಿಯತೊಡಗಿದೆ. ಮಳೆಗಾಲಕ್ಕೂ ಮುನ್ನ ಅಂಡರ್ ಪಾಸ್ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅದಕ್ಕಾಗಿ ಬೃಹತ್ ಹೊಂಡ ತೋಡಲಾಗಿತ್ತು. ಹೊಂಡದಲ್ಲಿ ಭಾರೀ ಪ್ರಮಾಣದ ಬಂಡೆ ಕಲ್ಲು ಕಂಡುಬಂದ ಕಾರಣ ಕಾಮಗಾರಿ ಬಹುತೇಕ ಕುಂಠಿತಗೊಂಡಿತ್ತು. ಭಾರೀ ಮಳೆಯಿಂದಾಗಿ ಹಾನಿಯಾಗದಂತೆ ಟಾರ್ಪಲ್ ಅಳವಡಿಸಲಾಗಿತ್ತು. ಆದರೆ, ಇಂದು ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ.