PUBG ಮೂಲಕ ಭೇಟಿಯಾದವನ ಜೊತೆ ಮದುವೆಯಾಗಲು ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ!!

ನವದೆಹಲಿ: ಜನಪ್ರಿಯ ಆನ್‌ಲೈನ್ ಗೇಮ್ PUBG ಮೂಲಕ ಭೇಟಿಯಾದ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮಕಥೆಯು ಇಬ್ಬರನ್ನೂ ಜೈಲು ಸೇರುವಂತೆ ಮಾಡಿದೆ.

27 ವರ್ಷದ ಸೀಮಾ ಗುಲಾಮ್ ಹೈದರ್, 22 ವರ್ಷದ ಸಚಿನ್ ಮೀನಾ ಅವರನ್ನು ಒಂದೆರಡು ವರ್ಷಗಳ ಹಿಂದೆ ವರ್ಚುವಲ್ ಗೇಮಿಂಗ್ ಪ್ಲಾಟ್‌ಫಾರ್ಮ್ PUBG ಮೂಲಕ ಭೇಟಿಯಾಗಿದ್ದಾರೆ ಮತ್ತು ಭಾರತದಲ್ಲಿ ನೆಲೆಸಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿಳಿದಿದ್ದಾಳೆ. ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆಕೆ ಮತ್ತು ಆಕೆಯ ಪ್ರೇಮಿ ಉತ್ತರ ಪ್ರದೇಶದ ನಗರವಾದ ಗ್ರೇಟರ್ ನೋಯ್ಡಾದಲ್ಲಿ ಒಂದು ತಿಂಗಳಿನಿಂದ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಇಬ್ಬರನ್ನೂ ಬಂಧಿಸಲಾಗಿದೆ. ನ್ಯಾಯಾಲಯ ಅವರನ್ನು 14 ದಿನಗಳ ಕಾಲ ಜೈಲಿನಲ್ಲಿ ಇರಿಸಿದೆ. ಮಹಿಳೆಯ ಮಕ್ಕಳು ತಮ್ಮ ತಾಯಿಯೊಂದಿಗೆ ಇದ್ದಾರೆ. ಮದುವೆಯಾಗಿ ಒಟ್ಟಿಗೆ ವಾಸಿಸಲು ಬಯಸುವುದಾಗಿ ಈ ಇಬ್ಬರೂ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದವಾರ ಭಾರತದಲ್ಲಿ ಸೀಮಾ ಹೈದರ್ ವಾಸಕ್ಕಾಗಿ ಸಲಹೆ ಕೇಲಲು ಸ್ಥಳೀಯ ವಕೀಲರನ್ನು ಭೇಟಿಯಾದ ಸಂದರ್ಭದಲ್ಲಿ ಆಕೆ ಮತ್ತು ಆಕೆಯ ಮಕ್ಕಳ ಪಾಕಿಸ್ಥಾನಿ ಪಾಸ್ ಪೋರ್ಟ್ ಕಂಡು ಬೆಚ್ಚಿದ ವಕೀಲ, ಪೊಲೀಸರಿಗೆ ತಿಳಿಸಿದ್ದಾರೆ. ವಕೀಲರ ಸೂಚನೆ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಅದಾಗಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ವ್ಯಕ್ತಿಯನ್ನು ಮದುವೆಯಾಗಿದ್ದ ಸೀಮಾ ಹೈದರ್ ಆತ ತನಗೆ ಕಿರುಕುಳ ನೀಡುತ್ತಿದ್ದ ಮತ್ತು ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂದಿದ್ದಾಳೆ. ಆದರೆ ಆಕೆಯ ಗಂಡ ಇದನ್ನು ಅಲ್ಲಗಳೆದಿದ್ದಾನೆ. ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹಣಕ್ಕಾಗಿ ತನ್ನ ಹೆತ್ತವರ ಜಮೀನು ಮಾರಿದ್ದಾಳೆ ಎನ್ನಲಾಗಿದೆ. ಈಕೆಯ ಗಂಡ ಆನ್ ಲೈನ್ ಆಟವನ್ನು ದೂರಿದ್ದು, ತನ್ನ ಹೆಂಡತಿ ಮತ್ತು ಮಕ್ಕಳು ಪಾಕಿಸ್ತಾನಕ್ಕೆ ಹಿಂತಿರುಗುವಂತೆ ಕೋರಿದ್ದಾನೆ.