ಉಡುಪಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತನ್ನ ಬಳಿ ಇದ್ದ ಆಡಿಯೋವನ್ನು ವಿಳಂಬವಾಗಿ ಬಿಡುಗಡೆ ಮಾಡಿದ ಮರ್ಮ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಸಿಐಡಿ ವಿಶೇಷ ಘಟಕಕ್ಕೆ ಸಹಕರಿಸದಿದ್ದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ.
ಸದ್ರಿ ಪ್ರಕರಣದಲ್ಲಿ ಕಾಂಗ್ರೆಸ್ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿದೆ. ಆದರೆ ಸಿಐಡಿ ಪೊಲೀಸರು ಇದುವರೆಗೆ ಬಂಧಿಸಿರುವ ಶಂಕಿತರೆಲ್ಲರೂ ಕಾಂಗ್ರೆಸ್ ಪಾಳಯಕ್ಕೆ ಸೇರಿದ ವ್ಯಕ್ತಿಗಳು ಎಂಬ ವಿಚಾರ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತೆನಿಸಿದೆ.
ಈಗಾಗಲೇ ಬಂಧಿತನಾಗಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಆಕ್ರಮ ಪ್ರಕರಣದ ಕಿಂಗ್ ಪಿನ್ ಎನ್ನಲಾದ ಕಲ್ಬುರ್ಗಿಯ ಅಫಜಲಪುರದ ಅರ್.ಡಿ. ಪಾಟೀಲ ಕಾಂಗ್ರೆಸ್‌ನ ಪ್ರಭಾವಿ ನಾಯಕರ ಪರಮಾಪ್ತ ಎಂಬ ವಿಚಾರ ಕಾಂಗ್ರೆಸ್‌ನ ಹಗರಣಗಳ ಕೂಪಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












