ಉಡುಪಿ: ನಾಡನ್ನು ಮುನ್ನಡೆಸುವ ಅವಕಾಶ ದೊರೆತಿದೆ. ಭಗವಂತನಿಂದ ನಿಷ್ಠೆ ಪ್ರಾಮಾಣಿಕತೆ ಹಾಗೂ ವಿಶ್ವಾಸಕ್ಕೆ ಕುಂದುಬಾರದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಹಾಗೂ ನಾಡನ್ನು ಸುಭಿಕ್ಷ ಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಇತ್ತರು.
ಅವರು ಕುಂಜಿಬೆಟ್ಟಿನ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗದೇವತೆಗೆ ವಿಶಿಷ್ಟ ಸ್ಥಾನವಿದೆ. ಅತ್ಯಂತ ಸೌಮ್ಯ ಹಾಗೂ ಭಯಂಕರ. ಪೂಜೆ ಮಾಡಿದ್ರೆ ವರ ತೊಂದರೆ ಕೊಟ್ಟರೆ ಪ್ರಾಣ ತೆಗೆಯುವ ಶಕ್ತಿ ಇದೆ. ಇದರ ಅರ್ಥ ನಮ್ಮ ಸದ್ಗುಣ ನಮಗೆ ವರವಾಗಿ ಪರಿಣಮಿಸುತ್ತದೆ. ದುರ್ಗುಣಗಳು ಶಾಪವಾಗುತ್ತವೆ. ನಮ್ಮ ದುರ್ಗುಣಗಳ ನಾಶಕ್ಕೆ ಈ ರೀತಿಯ ನಾಗ ಮಂಡಲ ಉತ್ಸವ ಅಗತ್ಯವಿದೆ ಎಂದರು.
ಹಸಿವು ಬಡತನಕ್ಕೆ ಸಾಮ್ಯವಿದೆ. ಹಸಿವು ಎಂದರೆ ದೇವರು ಕೊಟ್ಟ ಶಾಪವೋ ವರವೋ ಅರ್ಥಮಾಡಿಕೊಳ್ಳಬೇಕು. ಹಸಿವು ಇರದಿದ್ದರೆ, ಮನುಷ್ಯ ಅಭಿವೃದ್ದಿಯಾಗುತ್ತಿರಲಿಲ್ಲ. ಮನುಷ್ಯ ಕುಲದ ಅಭಿವೃದ್ಧಿಗಾಗಿಯೇ ಭಗವಂತ ಹಸಿವು ಎಂಬ ವರ ನೀಡಿದ್ದಾನೆ ಎಂದರು.
ನಾಗಮಂಡಲ ಅರಿವು ಮೂಡಿಸುತ್ತದೆ. ಮಾನವನ ಅರಿವೇ ಅವನ ಅಸ್ತಿತ್ವ. ಇಲ್ಲದಿದ್ದರೆ ಪ್ರಾಣಿ ಹಾಗೂ ಮನುಷ್ಯನಿಗೆ ವ್ಯತ್ಯಾಸವಿರುತ್ತಿರಲಿಲ್ಲ. ಪಾಪ ಪುಣ್ಯದ ಅರಿವು ದೇವರು ಕೊಟ್ಟ ವರ. ಮರೆವು ಸಹ ಒಂದು ರೀತಿಯ ವರವೇ. ನಕಾರಾತ್ಮಕ ನೆನೆಪುಗಳೆ ಮಾನವನಿಗೆ ಹೆಚ್ಚು. ದ್ವೇಷ ಸಮಾಜದಲ್ಲಿನ ಹರಡುತ್ತಿತ್ತು. ಮರೆವು ಇರುವುದರಿಂದ ಬದುಕು ಸುಂದರವಾಗಿದೆ ಎಂದರು.
ಸಾವು ಇಲ್ಲದಿದ್ದಿದ್ದರೆ ಭೂಮಿಯ ಮೇಲೆ ಸ್ಥಳವಿರುತ್ತಿರಲಿಲ್ಲ. ಸಾವು ಸಹ ಹುಟ್ಟಿನಷ್ಟೇ ಮುಖ್ಯ. ಅದಕ್ಕಿಂತ ಬದುಕು ಮುಖ್ಯ. ಬದುಕು ಮಾತ್ರ ಪ್ರಸ್ತುತ. ಬದುಕನ್ನು ಹಲವಾರು ವಿಧಾನಗಳಲ್ಲಿ ಬದುಕಿನ ಧರ್ಮವಿದೆ. ಒಬ್ಬೊಬ್ಬರ ಆಚರಣೆಗಳು ವಿಭಿನ್ನ. ಎಲ್ಲರಿಗೂ ತಿಳಿಹೇಳಿ ಪ್ರಜ್ಞೆಯನ್ನು ಜಾಗೃತಿ ಮೂಡಿಸಿ, ಭಾವನೆಗಳನ್ನು ಪವಿತ್ರಗೊಳಿಸಿ, ಆಚಾರ ವಿಚಾರಗಳನ್ನು ಇನ್ನಷ್ಟು ಉತ್ತಮಗೊಳಿಸಿ, ಸಮಾಜಕ್ಕೆ ಒಳ್ಳೆ ಕೆಲಸ ಮಾಡಲು ನಾಗಮಂಡಲೋತ್ಸವ ಪ್ರೇರೇಪಿಸುತ್ತದೆ ಎಂದು ಭಾವಿಸಿರುವುದಾಗಿ ತಿಳಿಸಿದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ವಿದ್ಯಾಪ್ರಸನ್ನತೀರ್ಥ ಶ್ರೀಗಳು ವಿಶ್ವವಲ್ಲಭತೀರ್ಥ ಶ್ರೀಗಳು ಸೋಂದೆ ಸಂಸ್ಥಾನಮಠ, ಶಿರೂರಿನ ವೇದವರ್ಧನ ತೀರ್ಥ ಶ್ರೀಗಳು, ಸಚಿವರಾದ ವಿ ಸುನಿಲ್ ಕುಮಾರ, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತು ಇತರರು ಉಪಸ್ಥಿತರಿದ್ದರು.