ಉಡುಪಿ: ಜಿಲ್ಲೆಯ ವಡ್ಡರ್ಸೆ, ಗೋಳಿಯಂಗಡಿ ಹಾಗೂ ಶಿರಿಯಾರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಉದ್ದೇಶಕ್ಕಾಗಿ ಹಾಗೂ ಮಹಿಳೆಯರು ಉದ್ಯೋಗದ ನಿಮಿತ್ತ ಪಟ್ಟಣಕ್ಕೆ ದಿನನಿತ್ಯ ಬಂದು ಹೋಗಲು ಖಾಸಗೀ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಖಾಸಗೀ ಬಸ್‌ಗಳ ಕೊರತೆಯ ಜೊತೆಗೆ, ಯಾವುದೇ ಸರ್ಕಾರಿ ಬಸ್‌ಗಳ ಸೇವೆ ಜನರಿಗೆ ಲಭ್ಯವಿಲ್ಲ. ಹಾಗಾಗಿ ಸರಕಾರಿ ಬಸ್ ಸೇವೆ ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಇಲ್ಲಿ ಸರಕಾರಿ ಬಸ್ ಸೇವೆ ಇಲ್ಲದಿರುವುದರಿಂದ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿನಿಯರು ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಕೋಟ-ಗೋಳಿಯಂಗಡಿ ಮಾರ್ಗದಲ್ಲಿ ಸರಕಾರಿ ಬಸ್ ಸೇವೆ ಆರಂಭಿಸುವಂತೆ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಈಗಾಗಲೇ ತಮಗೆ ಮನವಿ ಸಲ್ಲಿಸಿದ್ದು, ಶಿಫಾರಸ್ಸು ಮಾಡುವಂತೆ ನನ್ನಲ್ಲಿಯೂ ಮನವಿ ಮಾಡಿರುತ್ತಾರೆ ಎಂದವರು ತಿಳಿಸಿದ್ದಾರೆ.
ಆದ್ದರಿಂದ ಕೋಟ-ಗೋಳಿಯಂಗಡಿ ಮಾರ್ಗದಲ್ಲಿ ಹೊಸದಾಗಿ ಸರ್ಕಾರಿ ಬಸ್ ಸೇವೆ ಒದಗಿಸುವ ಮೂಲಕ ಈ ಭಾಗದ ಗ್ರಾಮೀಣ ಮಹಿಳೆಯರಲ್ಲಿ ಸರ್ಕಾರದ ಬಗ್ಗೆ ಭರವಸೆ ಮೂಡಿಸಬೇಕು ಎಂದು ಮಂಜುನಾಥ ಭಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













