ಉಡುಪಿ: ದೈನಂದಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ವಿಗ್ಗಿ ಸಂಸ್ಥೆಯ ಡೆಲಿವರಿ ಬಾಯ್ಸ್ ಇಂದ್ರಾಳಿಯ ಸ್ವಿಗ್ಗಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದ ನೌಕರರು, ವೇತನ ಪಾವತಿಯಲ್ಲಿ ವಂಚನೆ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಿ.ಮೀ ಗೆ ಅನುಗುಣವಾಗಿ ವೇತನ ಪಾವತಿ ಮಾಡುತ್ತಿಲ್ಲ. ಟಾರ್ಗೆಟ್ ನಲ್ಲಿ ಒಂದು ರೂಪಾಯಿ ಕಡಿಮೆಯಾದರೂ ಪ್ರೋತ್ಸಾಹ ಧನ ನೀಡುತ್ತಿಲ್ಲ. ಅಲ್ಲದೆ, ಡೆಲಿವರಿ ಬಾಯ್ ಗೆ ಅಪಘಾತ ಆದಂತಹ ಸಂದರ್ಭದಲ್ಲಿಯೂ ಕಂಪೆನಿಯ ಸ್ಥಳೀಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಪ್ರತಿಭಟನಾಕಾರರು ದೂರಿದರು.
ಬೇಡಿಕೆಗಳು: ದೈನಂದಿನ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು. ಸಾಪ್ತಾಹಿಕ ಪ್ರೋತ್ಸಾಹಧನ ಹೆಚ್ಚಳವಾಗಬೇಕು. ನಕಲಿ ಜಿಪಿಎಸ್ ಸ್ಥಳವನ್ನು ಸರಿಪಡಿಸಬೇಕು. ಗ್ರಾಹಕರ ರೇಟಿಂಗ್‌ಗಳ ಆಧಾರದ ಮೇಲೆ ನೀಡುವ ಪ್ರೋತ್ಸಾಹವನ್ನು ತೆಗೆದುಹಾಕಬೇಕು. ದೈನಂದಿನ ಪ್ರೋತ್ಸಾಹಕ್ಕಾಗಿ ಗುರಿಯನ್ನು ಸಾಧಿಸಲು ಯಾವುದೇ ಸಮಯದ ಮಿತಿ ನಿಗದಿ ಮಾಡಬಾರದು. ಫ್ಲೋಟಿಂಗ್ ನಗದು ಮಿತಿ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.