ಉಡುಪಿ: ಭವಿಷ್ಯ ನಿಧಿ ಪಿಂಚಣಿಯನ್ನು ಕನಿಷ್ಠ 6 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ಅನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿ ಉಡುಪಿ ತಾಲ್ಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘದ ನೇತೃತ್ವದಲ್ಲಿ ಉಡುಪಿ ತುಳುನಾಡು ಟವರ್ಸ್ನಲ್ಲಿರುವ ಪಿಎಫ್ ಕಚೇರಿಯ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಭವಿಷ್ಯನಿಧಿ ಪಿಂಚಣಿದಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್. ನರಸಿಂಹ ಅವರು ಮಾತನಾಡಿ, ಆಧಾರ್ ಕಾರ್ಡ್ಅನ್ನು ಕಡ್ಡಾಯಗೊಳಿಸುವ ಮೂಲಕ ಕಾರ್ಮಿಕರು ಬೆವರು ಹರಿಸಿ ದುಡಿದು ಕಟ್ಟಿದ ತಮ್ಮ ಪಿಂಚಣಿ ಹಣವನ್ನು ಪಡೆಯಲು ಆಗದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದೊಡ್ಡಿದೆ ಎಂದರು.
ನಿವೃತ್ತಿಯಾದ ಬಳಿಕ ಪಿಂಚಣಿ ಹಣದಿಂದ ಜೀವನ ಸಾಗಿಸಬಹುದೆಂಬ ನಿಟ್ಟಿನಿಂದ ಬೆವರು ಸುರಿಸಿ ದುಡಿದ ಹಣವನ್ನು ಕಾರ್ಮಿಕರು ಭವಿಷ್ಯನಿಧಿ ಖಾತೆ ಜಮೆ ಮಾಡಿದ್ದಾರೆ. ಆದರೆ ಈಗ ಪಿಂಚಣಿ ಪಡೆಯಲು ಹರಸಾಹಸ ಪಡೆಬೇಕಾದ ಅನಿವಾರ್ಯತೆ ಎದುರಾಗಿದೆ. ಅಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು.
ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿ ಜನರನ್ನು ಸತಾಯಿಸಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಭವಿಷ್ಯನಿಧಿ ಇಲಾಖೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಇದರಿಂದ ಕಾರ್ಮಿಕರು ಕಂಪೆನಿಗೆ ನೀಡಿದ ಜನ್ಮ ದಿನಾಂಕಕ್ಕೂ ಆಧಾರ್ ಕಾರ್ಡ್ನಲ್ಲಿರುವ ದಿನಾಂಕ್ಕೂ ವ್ಯತ್ಯಾಸ ಆಗಿದ್ದು, ಇದು ಕಾರ್ಮಿಕರನ್ನು ಪಿಂಚಣಿಯಿಂದ ವಂಚಿತರನ್ನಾಗಿಮಾಡಿದೆ. ಹಾಗಾಗಿ ಆಧಾರ್ ಕಾರ್ಡ್ನಿಂದ ಕಾರ್ಮಿಕರಿಗೆ ವಿನಾಯಿತಿ ನೀಡಬೇಕು. ಸಂಸ್ಥೆಗೆ ಸೇರುವಾಗ ನೀಡಿದ ಜನ್ಮ ದಿನಾಂಕವನ್ನೇ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಪಿಂಚಣಿದಾರರ ಸಂಘದ ಅಧ್ಯಕ್ಷೆ ಲಲಿತ, ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಸುಂದರಿ, ಕೆ. ಲಕ್ಷ್ಮಣ, ಕವಿರಾಜ್, ನಳಿನಿ, ಸಂಜೀವ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.