ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ರಕ್ತ ಸ್ರಾವದಿಂದ ಬಳಲಿ ಸಾವನ್ನಪ್ಪಿದ ಘಟನೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.
ಕುಂದಾಪುರ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಮೃತರ ಕುಟುಂಬಿಕರು ಹಾಗೂ ಸಾರ್ವಜನಿಕರು ಸೋಮವಾರದಂದು ಕುಂದಾಪುರದ ಸರಕಾರಿ ಆಸ್ಪತ್ರೆಯ ಎದುರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಕುಂದಾಪುರ ಅಂಕದಕಟ್ಟೆಯ ನಿವಾಸಿ ಸುಜಾತ(೨೭) ಅವರಿಗೆ ತಾಯಿ ಮಕ್ಕಳ ಆಸ್ಪತ್ರೆಯಾಗಿರುವ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ಡಾ. ರಜನಿ ಅವರು ಸಾಮಾನ್ಯ ಹೆರಿಗೆ ಮಾಡಿಸಿದ್ದರು. ಹೆರಿಗೆಯಾದ ಬಳಿಕ ಅತಿಯಾದ ರಕ್ತ ಸ್ರಾವದಿಂದಿಂದಾಗಿ ಗಂಭೀರಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಮಧ್ಯಾಹ್ನದ ಸುಮಾರಿಗೆ ಸುಜಾತ ಚಿಕಿತ್ಸೆಗೆ ಸ್ಪಂದಿಸಿದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಆಸ್ಪತ್ರೆಯಲ್ಲಿ ಜಮಾಯಿಸಿದ ಸಾರ್ವಜನಿಕರು:
ಸೋಮವಾರ ಬೆಳಿಗ್ಗೆ ೧೦ ಗಂಟೆ ವೇಳೆಗೆ ಸುಜಾತ ಕುಟುಂಬಿಕರು ಹಾಗೂ ದೇವಾಡಿಗ ಸಮಾಜ, ಜನಪ್ರತಿನಿಧಿಗಳು, ಮಹಿಳಾ ಪರ ಹೋರಾಟಗಾರರ ಸಹಿತ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕುಂದಾಪುರ ಸರಕಾರಿ ಆಸ್ಪತ್ರೆಯೆದುರು ಜಮಾಯಿಸಿದರು. ಸುಜಾತ ಕುಟುಂಬಿಕರು ಸಹಿತ ಪ್ರಮುಖ ಒಂದಷ್ಟು ಜನರನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಚೇರಿಗೆ ಕರೆದು ಅಲ್ಲಿಗೆ ವೈದ್ಯೆ ರಜನಿಯನ್ನು ಕರೆಸಲಾಯಿತು. ಈವೇಳೆಯಲ್ಲಿ ಮಾತನಾಡಿದ ಮುಖಂಡರು, ಸುಜಾತಾ ತನ್ನ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದು ಅವರ ಈ ಸಾವಿನಿಂದ ಬಡ ಕುಟುಂಬ ಕಂಗೆಟ್ಟಿದೆ. ಈ ಸಾವಿಗೆ ನ್ಯಾಯ ದೊರಕಬೇಕಿದೆ.
ಸುಜಾತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿ. ಯಾವುದೇ ಬಡ ಕುಟುಂಬಕ್ಕೂ ಇಂತಹ ಪರಿಸ್ಥಿತಿ ಆಗಬಾರದು. ವೈದ್ಯರು ದೇವರಾಗಿರಿ…ಯಾರನ್ನು ಕೊಲ್ಲಲೂ ಹೋಗಬೇಡಿ ಎಂದರು. ಈ ವೇಳೆಯಲ್ಲಿ ವೈದ್ಯರು ತಮ್ಮ ದಾಖಲೆ ಪತ್ರಗಳ ಪ್ರದರ್ಶನ ಮಾಡಿ ಸಬೂಬು ನೀಡಲು ಮುಂದಾದಾಗ ಅಲ್ಲಿದ್ದವರಿಂದ ಬಾರೀ ಆಕ್ರೋಶ ವ್ಯಕ್ತವಾಯಿತು.
ವೈದ್ಯೆ..ನೀನಾ ಅಲ್ಲ ನಾನಾ…?
ಹೆರಿಗೆ ಹೊಟ್ಟೆ ನೋವಿನಿಂದ ಬಳಲಿ ಸಿಸೇರಿನ್ ಮಾಡಿ ಎಂದು ವೈದ್ಯೆ ಬಳಿ suರಿಂಣ ಅಂಗಲಾಚಿದರೂ `ನಾನಾ ವೈದ್ಯೆ, ನೀನಾ’? ಎಂಬ ಉಡಾಫೆ ಉತ್ತರ ಕೊಟ್ಟಿದ್ದಾರೆ. ವೈದ್ಯೆಯ ಬೇಜವಬ್ದಾರಿಯಿಂದಾಗಿ ಸುಜಾತ ಸಾವನ್ನಪ್ಪಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
ಮೃತದೇಹ ತರಲು ಹಣವಿಲ್ಲ:
ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಒಂದು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಬಡಕುಟುಂಬದ ಸುಜಾತ ಮೃತದೇಹ ಬಿಡಿಸಿಕೊಳ್ಳಲು ಸಾರ್ವಜನಿಕರು ೫೦ ಸಾವಿರ ಒಂದುಗೂಡಿಸಿ ಕೊಟ್ಟಿದ್ದೇವೆ. ಸುಜಾತಾ ಅವರದ್ದು ತೀರಾ ಬಡ ಕುಟುಂಬವಾಗಿದ್ದು ಇಡೀ ಮನೆ ಇದೀಗಾ ಕಂಗೆಟ್ಟಿದೆ. ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಎಂದು ಮುಖಂಡ ಶಂಕರ್ ಅಂಕದಕಟ್ಟೆ ಆಗ್ರಹಿಸಿದ್ದಾರೆ.
ಅಂದು ಆಗಿದ್ದೇನು?
ಸುಜಾತ ಹಾಗೂ ಸುಧೀರ್ ದೇವಾಡಿಗ ಎನ್ನುವರಿಗೆ ವರ್ಷಗಳ ಹಿಂದೆ ವಿವಾಹವಾಗಿದ್ದು ಅವರು ಗರ್ಭಿಣಿಯಾದ ನಂತರ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿಯೇ ರೆಗ್ಯುಲರ್ ತಪಾಸಣೆಗಾಗಿ ಬರುತ್ತಿದ್ದರು. ಈ ವೇಳೆ ಸಾಮಾನ್ಯ ಹೆರಿಗೆ ಅಸಾಧ್ಯವೆಂದು ಸ್ಕ್ಯಾನಿಂಗ್ ವರದಿಯಲ್ಲಿದ್ದರೂ ಕೂಡ ವೈದ್ಯೆ ಸಾಮಾನ್ಯ ಹೆರಿಗೆ ಆಗುವ ಭರವಸೆ ನೀಡಿದ್ದರು. ಡಿ.೧೧ರಂದು ಹೆರಿಗೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಅವರಿಗೆ ಎರಡು ದಿನಗಳ ಬಳಿಕ ಹೊಟ್ಟೆನೋವು ತಾಳಲಾರದೇ ಸಿಸೆರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಪರಿಪರಿಯಾಗಿ ಕೇಳಿಕೊಂಡರೂ ಕೂಡಾ ವೈದ್ಯೆ ರಜನಿ ನಿರ್ಲಕ್ಷ್ಯತೋರಿದ್ದು, ಸಾಮಾನ್ಯ ಹೆರಿಗೆ ಮಾಡುವ ಧೈರ್ಯ ನೀಡಿ ಹೆರಿಗೆ ಮಾಡಿಸಿದ್ದಾರೆ. ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ವಿಪರೀತ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದು ಸುಜಾತ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ವೈದ್ಯರು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ ಎಂದು ಸುಜಾತ ಸಹೋದರಿ ಹೇಳಿದ್ದಾರೆ.
ವೈದ್ಯೆ ಹೇಳೋದು ಏನು?
ಸುಜಾತಾ ಡಿ.೧೧ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ೧೪ ತಾರೀಖಿನಂದು ನನ್ನ ಕರ್ತವ್ಯ ಆರಂಭವಾಗಿತ್ತು. ನನ್ನ ಪರಿಶೀಲನೆಯಲ್ಲಿ ಎಲ್ಲವೂ ಸರಿಯಾಗಿತ್ತು. ಶನಿವಾರ (ಡಿ.೧೪) ೬.೩೭ಕ್ಕೆ ಸಾಮಾನ್ಯ ಹೇರಿಗೆಯಾಗಿದ್ದು ಮಗು ಅತ್ತು ೬.೫೦ ರ ಸಮಯದಲ್ಲಿ ಕಸ ಹೊರಗೆ ಬಂತು. ಅದೇ ಸಮಯಕ್ಕೆ ಗರ್ಭಕೋಶವು ಕುಗ್ಗಬೇಕಿದ್ದು ಅದಾಗದೇ ರಕ್ತ ಸ್ರಾವ ಹೆಚ್ಚಾಗಿತ್ತು. ಯಾವುದೇ ಮಾತ್ರೆ, ಇಂಜೆಕ್ಷನ್ ಕೊಟ್ಟರೂ ಪರಿಸ್ಥಿತಿ ಸುಧಾರಿಸಿಲ್ಲ.
ರಕ್ತ ಹೆಪ್ಪುಗಟ್ಟುವಿಕೆಯೂ ನಿಂತಾಗ ನಾವು ಬಾಣಂತಿಯನ್ನು ಈ ಬಗ್ಗೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಯೋಚನೆ ನೀಡಿದೆವು. ಖುದ್ದು ನಾನು ಮತ್ತು ಇನ್ನೊಬ್ಬ ವೈದ್ಯರು, ಸಿಬ್ಬಂದಿಗಳು ಆಂಬುಲೆನ್ಸ್ ಮೂಲಕ ಮಣಿಪಾಲಕ್ಕೆ ತೆರಳಿದ್ದು ಅಲ್ಲಿ ರಾತ್ರಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ತೀವ್ರನಿಗಾ ಘಟಕದಲ್ಲಿ ಅವರನ್ನು ವರ್ಗಾಯಿಸಲಾಯಿತು. ಭಾನುವಾರ ಮಧ್ಯಾಹ್ನ ೧೨.೩೦ಕ್ಕೆ ಸುಜಾತ ಮೃತಪಟ್ಟಿದ್ದನ್ನು ಅಲ್ಲಿನ ವೈದ್ಯರು ದೃಢೀಕರಿಸಿದ್ದಾರೆ. ಇದರಲ್ಲಿ ನಮ್ಮದೂ ತಪ್ಪಿಲ್ಲ. ನಾನು ಎಲ್ಲವನ್ನೂ ರೋಗಿಯ ಬಳಿಯೂ ಹೇಳಿದ್ದೆ. ಎಲ್ಲವೂ ಕೂಡ ದಾಖಲೆಯಾಗಿದೆ ಎಂದು ಸರಕಾರಿ ಆಸ್ಪತ್ರೆ ವೈದ್ಯೆ ರಜನಿ ಪ್ರತಿಕ್ರಿಯಿಸಿದ್ದಾರೆ.
ಆಸ್ಪತ್ರೆಯಲ್ಲಿ ವಾಗ್ವಾದ:
ವೈದ್ಯೆಯ ನಿರ್ಲಕ್ಷ್ಯದಿಂದಲೇ ಸುಜಾತ ಸಾವನ್ನಪ್ಪಿದ್ದಾರೆ ಎಂದು ಆಗ್ರಹಿಸಿ ಸಾರ್ವಜನಿಕರು ಆಸ್ಪತ್ರೆಯ ಮುಂದೆ ಪ್ರತಿಭಟನೆಗೆ ಮುಂದಾದ ವೇಳೆಯಲ್ಲಿ ಮಧ್ಯಪ್ರವೇಶಿಸಿ ವೈದ್ಯರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟರು. ಆಡಳಿತ ವೈದ್ಯಾಧಿಕಾರಿ ಕಚೇರಿಯೊಳಗೆ ಪ್ರಸೂತಿ ವೈದ್ಯೆಯ ಹಾಗೂ ಮುಖಂಡರ ನಡುವಿನ ಮಾತುಕತೆಗೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆಯಲ್ಲಿ ವೈದ್ಯರು ಹಾಗೂ ಮುಖಂಡರ ನಡುವೆ ವಾಗ್ವಾದ ನಡೆಯಿತು. ಜಿ.ಪಂ ಸದಸ್ಯೆ ಗೌರಿ ದೇವಾಡಿಗ ಹಾಗೂ ತಾ.ಪಂ ಸದಸ್ಯ ಜಗದೀಶ್ ದೇವಾಡಿಗ ಅವರು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಮಧ್ಯಪ್ರವೇಶಿಸಿದ ಕುಂದಾಪುರ ಠಾಣೆಯ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಮುಖಂಡರನ್ನು ಸಮಧಾನಪಡಿಸಿದರು. ಶಾತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಅದನ್ನು ಬಿಟ್ಟು ಕೂಗಾಡಿದರೆ ಏನು ಪ್ರಯೋಜನವಿಲ್ಲ ಎಂದು ಠಾಣಾಧಿಕಾರಿ ಮುಖಂಡರಿಗೆ ಮನವಿ ಮಾಡಿದರು.
ಈ ವೇಳೆಯಲ್ಲಿ ಸುಜಾತ ಸಹೋದರಿ, ದೇವಾಡಿಗ ಸಮಾಜದ ಮುಖಂಡ ಶಂಕರ ಅಂಕದಕಟ್ಟೆ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯರಾದ ರಾಝು ದೇವಾಡಿಗ, ಜಗದೀಶ್ ದೇವಾಡಿಗ, ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಮಂಜುಳಾ ದೇವಾಡಿಗ ಗಂಗೊಳ್ಳಿ ಮೊದಲಾದವರು ಇದ್ದರು.












