ತುಳು ಭಾಷೆಗೆ ಸಂವಿಧಾನಿಕ ಮಾನ್ಯತೆಗಾಗಿ ಅಕ್ಟೋಬರ್ 10 ರಂದು ಮಿನಿ ವಿಧಾನಸೌಧದೆದುರು ಪ್ರತಿಭಟನೆ

ಮಂಗಳೂರು/ಉಡುಪಿ: ತುಳುನಾಡಿನ ಮತ್ತು ತುಳುವರ ಮಾತೃ ಭಾಷೆ ತುಳುವಿಗೆ ಭಾರತೀಯ ಸಂವಿಧಾನದ 347 ನೇ ವಿಧಿಯ ಪ್ರಕಾರ ಕರ್ನಾಟಕದ ಅಧಿಕೃತ ಭಾಷೆ ಎಂದು ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಬೆಳಿಗ್ಗೆ 9.30 ಗಂಟೆಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.

ಭಾರತೀಯ ಸಂವಿಧಾನದ 29 ನೇ ವಿಧಿಯು ವಿಶಿಷ್ಟವಾದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿರುವ ನಾಗರಿಕರ ಒಂದು ವಿಭಾಗವು ಅದನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿದೆ ಎಂದು ಹೇಳಿದೆ. ತುಳುವಿಗೆ ತನ್ನದೇ ಆದ ಲಿಪಿಯಿದ್ದು, ಉಡುಪಿ, ಮಂಗಳೂರು ಮತ್ತು ಕೇರಳದ ಕಾಸರಗೋಡಿನಲ್ಲಿ ಅಧಿಕೃತ ಆಡುಭಾಷೆಯಾಗಿದ್ದರೂ, ತುಳುವನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಕೂಗು ಹಲವಾರು ದಶಕಗಳಿಂದ ಕೇಳಿಬರುತ್ತಿದ್ದರೂ, ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಇತ್ತ ಕಡೆ ಗಮನ ಹರಿಸಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿದ್ದರೂ, ತುಳುವಿಗೆ ಸಂವಿಧಾನದ ಮಾನ್ಯತೆ ದೊರಕಿಲ್ಲವಾದ್ದರಿಂದ ತುಳುವರು ಇದರಿಂದ ವಂಚಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಬರ್ಟ್ ಕಾಲ್ಡ್ವೆಲ್ (1814-1891), ತಮ್ಮ ಪುಸ್ತಕ, ‘ಎ ಕಂಪೇರಿಟಿವ್ ಗ್ರಾಮರ್ ಆಫ್ ದಿ ದ್ರಾವಿಡಿಯನ್ ಆರ್ ಸೌತ್-ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್’ ನಲ್ಲಿ ತುಳುವನ್ನು “ದ್ರಾವಿಡ ಕುಟುಂಬದ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.

ತುಳುವಿಗೆ ಮಾನ್ಯತೆ ನೀಡುವುದರಿಂದಾಗುವ ಪ್ರಯೋಜನಗಳು

# ತುಳುವನ್ನು 8 ನೇ ಪರಿಚ್ಛೇದಕ್ಕೆ ಸೇರಿಸಿದರೆ ತುಳು ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ಸಿಗುತ್ತದೆ.
# ತುಳು ಪುಸ್ತಕಗಳನ್ನು ಇತರ ಮಾನ್ಯತೆ ಪಡೆದ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ.
# ಸಂಸತ್ತಿನ ಸದಸ್ಯರು ಮತ್ತು ಶಾಸಕರು ಕ್ರಮವಾಗಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ತುಳುವಿನಲ್ಲಿ ಮಾತನಾಡಬಹುದು.

#ಅಭ್ಯರ್ಥಿಗಳು ತುಳುವಿನಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಂತಹ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು.

ಕೊನೆಯ ಜನಗಣತಿಯ ಪ್ರಕಾರ ಸುಮಾರು 18,46,427 ತುಳುಭಾಷಿಕರಿದ್ದಾರೆ. ತುಳು ಭಾಷೆಯನ್ನು ಅಪಾಯದಲ್ಲಿರುವ ಭಾಷೆ ಎಂದೂ ಗುರುತಿಸಲಾಗಿದೆ. ತುಳು ಭಾಷೆ ಮತ್ತು ಆಚಾರ ವಿಚಾರಗಳಿಗೆ ಹಲವಾರು ಶತಮಾನಗಳ ಇತಿಹಾಸವಿದೆ. ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿಸುವುದರಿಂದ ತುಳುವ ಸಂಸ್ಕೃತಿಯನ್ನು ಸಂರಕ್ಷಿಸಬಹುದಾಗಿದೆ. ತುಳುನಾಡಿನಲ್ಲಿ ಜಾತಿ-ಮತ-ಬೇಧವಿಲ್ಲದೆ ಪ್ರತಿಯೊಬ್ಬರೂ ತುಳುವಿನಲ್ಲೇ ವ್ಯವಹರಿಸುವುದು ಇಲ್ಲಿನ ವೈಶಿಷ್ಟ್ಯವಾಗಿದೆ.