ಉಡುಪಿ: ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ಗೂಂಡಾಗಿರಿ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಹಬಾಳ್ವೆ ಉಡುಪಿ ಜಿಲ್ಲೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.
ದಲಿತ ಮುಖಂಡರಾದ ಸುಂದರ್ ಮಾಸ್ಟರ್ ಮಾತನಾಡಿ, ಮಲ್ಪೆ ಬಂದರಿನಲ್ಲಿ ಎಲ್ಲರಿಗೂ ಸಮಾನವಾಗಿ ದುಡಿಯುವ ಹಕ್ಕಿದೆ. ಸರ್ವ ಜನರಿಗೂ ದುಡಿಯುವ ಹಕ್ಕು ಇದೆ. ಅಲ್ಲಿರುವ ಬಲಾಡ್ಯರು ಹಿರಿಯರು ಮಾಡಿದ ಬಂದರು ಎನ್ನುವಂತೆ ಭಾವಿಸಿ ಬಲಪ್ರಯೋಗ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಪಾಳೇಗಾರಿಕೆ ಪ್ರವೃತ್ತಿಯನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ ಎಂದರು.
ಪ್ರೊ. ಫಣಿರಾಜ್ ಮಾತನಾಡಿ, ಈ ಹೋರಾಟವು ಸಮಾನತೆಗಾಗಿ, ಬದುಕುವ ಹಕ್ಕಿನ ಹೋರಾಟವಾಗಿದೆ. ಶೇಖ್ ಅಯ್ಯಬ್ ಅವರದ್ದು ಒಂದು ಪ್ರಕರಣವಲ್ಲ ಇದರ ಹಿಂದೆ ರಾಜಕೀಯ ಹಿನ್ನೆಲೆ ಕೂಡ ಇದೆ. ಲಂಬಾಣಿ ಮಹಿಳೆ ಮೇಲೆ ನಡೆದ ಪ್ರಕರಣಕ್ಕೆ ಒಂದು ವರ್ಷವಾಗುವ ಮುನ್ನವೇ ಇನ್ನೊಂದು ಪ್ರಕರಣ ವರದಿಯಾಗಿದೆ. ಆ ಪ್ರಕರಣದಲ್ಲಿ ಹೊಡೆದು ವೀಡಿಯೋ ಮಾಡಿ ಹರಿಯ ಬಿಟ್ಟಿದ್ರು. ದಲಿತ ಸಂಘಟನೆಯ ಮುತುವರ್ಜಿಯಿಂದ ಪ್ರಕರಣ ದಾಖಲಿಸಿದ್ರು ಎಂದರು.
ಇದು ಹಲ್ಲೆ ಮಾಡಿದ ಮನಸ್ಥಿತಿಯ ವಿರುದ್ಧದ ಹೋರಾಟ. ಶ್ರಮಿಕರ ಮೇಲೆ ನಡೆದ ದೌರ್ಜನ್ಯ ಕೇವಲ ಅಪರಾಧ ಪ್ರಕರಣವಲ್ಲ, ಫ್ಯಾಸಿಸ್ಟ್ ದೌರ್ಜನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಲ್ಪೆ ಬಂದರು ಪ್ರದೇಶದಲ್ಲಿ ಪೊಲೀಸ್ ಹೊರ ಠಾಣೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
















