ಕುಂದಾಪುರ: ಹೆರಿಗೆ ಸಂದರ್ಭ ಹಸುಗೂಸು ಮೃತ; ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ ವಿರುದ್ದ ಸಾರ್ವಜನಿಕರಿಂದ ಧರಣಿ

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಹುಸುಗೂಸು ಮೃತಪಟ್ಟ ಘಟನೆ ವರದಿಯಾಗಿದೆ.

ನವೆಂಬರ್ 17ರಂದು ರಾತ್ರಿ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಎಂಬವರ ಪತ್ನಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗು ಮೃತಪಟ್ಟಿದೆ ಎಂದು ಮನೆಯವರು ಹಾಗೂ ಗ್ರಾಮಸ್ಥರು ಆರೋಪಿಸಿ ಸರಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಸಂಜೆ ನಡೆದಿದೆ.

ಪ್ರಕರಣದ ವಿವರ:

ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದ ಜ್ಯೋತಿ ಖಾರ್ವಿ ಎಂಬವರು ನ. 16ರಂದು ವಾಡಿಕೆಯ ತಪಾಸಣೆಗಾಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಸಂದರ್ಭ ಎಂಟೂವರೆ ತಿಂಗಳ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಬಗ್ಗೆ ವೈದ್ಯರಲ್ಲಿ ಪ್ರಸ್ತಾವಿಸಿದಾಗ ಅವಶ್ಯಕತೆ ಇಲ್ಲ ಎಂದಿದ್ದರು ಎನ್ನಲಾಗಿದೆ. ಆಕೆ ಮನೆಗೆ ಹಿಂತಿರುಗಿದ್ದು, ಮಾರನೇ ದಿನ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಪತಿ ಶ್ರೀನಿವಾಸ ಖಾರ್ವಿ ಪತ್ನಿಯನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿ ಸರಿಯಾಗಿ ಡ್ಯೂಟಿ ಡಾಕ್ಟರ್ ಇಲ್ಲದ ಕಾರಣ ನೀಡಿ ಅಡ್ಮಿಷನ್ ಮಾಡಲಿಲ್ಲ ಎನ್ನಲಾಗಿದೆ. ನವೆಂಬರ್ 20 ರಂದು ಬೆಳಿಗ್ಗೆ ನಾರ್ಮಲ್ ಡೆಲಿವರಿ ಆಗಿದೆ, ಆದರೆ ಹೆರಿಗೆ ಆದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಶ್ರೀನಿವಾಸ ಖಾರ್ವಿಯಲ್ಲಿ ತಿಳಿಸಿದ್ದಾರೆ. ಕಾರಣ ಕೇಳಿದಾಗ ಮಗುವಿನ ಕುತ್ತಿಗೆಗೆ ಕರುಳು ಸಿಕ್ಕಿಹಾಕಿಕೊಂಡಿತ್ತು ಎನ್ನುವ ಉತ್ತರ ಲಬ್ಯವಾಗಿದೆ. ಇದರಿಂದ ಆಕ್ರೋಶಿತಗೊಂಡ ಸಾರ್ವಜನಿಕರು ಎಲ್ಲವೂ ಸರಿಯಾಗಿದ್ದ ಮೇಲೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ನಿರ್ಲಕ್ಷ್ಯ ವಹಿಸಿದ ವೈದ್ಯರನ್ನು ಕೂಡಲೇ ಅಮಾನತು ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳದಲ್ಲೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರುವಂತೆ ಪಟ್ಟು ಹಿಡಿದ ಕಾರಣ ಸಂಜೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಭೇಟಿ ನೀಡಿ ಪ್ರತಿಭಟನಕಾರರಿಂದ ಅಹವಾಲು ಸ್ವೀಕರಿಸಿದ್ದಾರೆ.

ರಾತ್ರಿ ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿದ್ದಾರೆ. ವೈದ್ಯರನ್ನು ಅಮಾನತು ಮಾಡದೇ ಇದ್ದರೆ ಕುಂದಾಪುರ ಹಾಗೂ ಗಂಗೊಳ್ಳಿ ಬಂದ್ ಗೆ ಕರೆ ನೀಡುವ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.