ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗಾಗಿ ಮತ್ತೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ವೇತನ ಪರಿಷ್ಕರಣೆ ಹಾಗೂ ಬಾಕಿ ಇರುವ ಹಣ ಪಾವತಿಸುವಂತೆ ಆಗ್ರಹಿಸಿ, ಅವರು ಹೋರಾಟಕ್ಕೆ ಮುಂದಾಗಿದ್ದಾರೆ.
ನಾಲ್ಕು ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆಗೆ ಕರೆ ನೀಡಿದ್ದು, ಸಾವಿರಾರು ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಇದರ ಪರಿಣಾಮವಾಗಿ BMTC ಮತ್ತು KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ನಾಳೆಯಿಂದಲೇ ಬಸ್ ಸೇವೆಗಳಲ್ಲಿ ಅಡಚಣೆ ಉಂಟಾಗಬಹುದು ಎಂದು ತಿಳಿದುಬಂದಿದ್ದು, ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ನೌಕರರು ಸಜ್ಜಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ನಿಗಮಗಳು ನೌಕರರಿಗೆ ಕಡ್ಡಾಯ ಹಾಜರಾತಿ ಸೂಚನೆ ನೀಡಿವೆ. ಅನಧಿಕೃತವಾಗಿ ರಜೆ ತೆಗೆದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅಮಾನತು ಮಾಡುವ ಎಚ್ಚರಿಕೆಯನ್ನು BMTC ಮತ್ತು KSRTC ನೀಡಿವೆ.

















