ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಜನದಟ್ಟಣೆ: ಪೊಲೀಸರಿಂದ ಅವಕಾಶ ನಿರಾಕರಣೆ; ಭಕ್ತರಿಂದ ರಸ್ತೆ ತಡೆದು ಪ್ರತಿಭಟನೆ

ಕೊಚ್ಚಿ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಈ ವರ್ಷ ಅಯ್ಯಪ್ಪ ವೃತಧಾರಿಗಳ ಭಾರೀ ಜನಸಂದಣಿ ಕಂಡು ಬರುತ್ತಿದ್ದು, ದೇಗುಲದಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ.

ಯಾತ್ರಾರ್ಥಿಗಳ ವಿಪರೀತ ದಟ್ಟಣೆಯನ್ನು ಕಂಡು ಆಂಧ್ರಪ್ರದೇಶ, ತಮಿಳುನಾಡು, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಮುಂತಾದ ಸ್ಥಳಗಳಿಂದ ಹಲವಾರು ಭಕ್ತರು ದೇಗುಲ ಪ್ರವಾಸವನ್ನು ನಿಲ್ಲಿಸಿ ಮನೆಗೆ ಮರಳಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಪೊಲೀಸರು ವಾಹನಗಳನ್ನು ತಡೆದಿದ್ದು ಪ್ರವಾಸಿಗರನ್ನು ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು ಇದರಿಂದ ಭಕ್ತರು ಬೇಸತ್ತು ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

ಆನ್‌ಲೈನ್ ಮನೋರಮಾ ವರದಿಯ ಪ್ರಕಾರ, ಶಬರಿಮಲೆ ಯಾತ್ರಾರ್ಥಿಗಳು ಮಂಗಳವಾರ ಎರುಮೇಲಿಯಲ್ಲಿ ರಸ್ತೆ ತಡೆ ನಡೆಸಿ ಪಂಪಾಗೆ ಹೋಗಲು ಅನುಮತಿ ನೀಡದ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿದ್ದಾರೆ. ವಿವಿಧ ರಾಜ್ಯಗಳ ಭಕ್ತರು ಎರುಮೇಲಿ-ರಣ್ಣಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರಮುಖ ಯಾತ್ರಾ ಕೇಂದ್ರವಾದ ಎಟ್ಟುಮನೂರು ಮಹಾದೇವ ದೇವಸ್ಥಾನದಲ್ಲಿ ಮುಂಜಾನೆ ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಗಂಟೆಗಟ್ಟಲೆ ಕಾದರೂ ಯಾತ್ರಾರ್ಥಿಗಳನ್ನು ಶಬರಿಮಲೆಗೆ ತೆರಳದಂತೆ ತಡೆಯಲಾಗಿದೆ. ಎರುಮೇಲಿ ಮತ್ತು ಪಂಪಾದಲ್ಲಿ ಜನಜಂಗುಳಿ ಇದ್ದ ಕಾರಣ ಹಿಂದಿನ ದಿನ ಬೆಳಗ್ಗೆ ಎಟ್ಟುಮನೂರು ದೇವಸ್ಥಾನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಶಬರಿಮಲೆಗೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ವರದಿ ತಿಳಿಸಿದೆ.

ಪೊಲೀಸರು ವಾಹನಗಳನ್ನು ತಡೆದಿದ್ದರಿಂದ ಭಕ್ತರು ಎರುಮೇಲಿಯಿಂದ ನಿಲಕ್ಕಲ್‌ಗೆ ತಲುಪಲು ಎಂಟು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಟಿಎನ್‌ಐಇ ವರದಿ ಮಾಡಿದೆ. ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿದ್ದರಿಂದ ಭಕ್ತರಿಗೆ ಪಂಪಾಕ್ಕೆ ಹೋಗಲು ಸಾಧ್ಯವಾಗಲಿಲ್ಲ. ದೇವರ ದರ್ಶನಕ್ಕೆ ಬಂದಿದ್ದ ಹಲವಾರು ಭಕ್ತರು ದರ್ಶನ ಮಾಡದೆಯೆ ಹಿಂತಿರುಗುವಂತಾಗಿದ್ದು, ಕೇರಳ ಸರ್ಕಾರದ ನಿರ್ವಹಣಾ ವೈಫಲ್ಯದ ಕುರಿತು ಸಾರ್ವಜನಿಕರು ಕಿಡಿಕಾರಿದ್ದಾರೆ.