ಉಡುಪಿ: ದೇವನಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ 40,000 ಜನಸಂಖ್ಯೆ ಇರುವ 7100 ಮನೆಗಳನ್ನು ಹೊಂದಿರುವಂತಹ ಪ್ರದೇಶದ ನಾಗರಿಕರಿಗೆ ಅರ್ಧ ಎಕರೆ ಜಾಗದಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕದಿಂದ ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಕೊಳಕು ವಾಸನೆ ಇಲ್ಲ. ಮಲ ತ್ಯಾಜ್ಯದ ನೀರಿನ ಅಂಶವನ್ನು ತೋಡಿಗೆ ಅಥವಾ ನದಿಗೆ ಬಿಡಲಾಗುವುದಿಲ್ಲ ಬದಲಿಗೆ ಮಲವನ್ನು ಕೇಕ್ ರೂಪದಲ್ಲಿ ಹಸಿ ಕಸದ ಜೊತೆಯಲ್ಲಿ ಗೊಬ್ಬರವನ್ನಾಗಿ ಮಾಡಿ ಅಲ್ಲಿಯ ಕೃಷಿಕರಿಗೆ ಮಾರಾಟ ಮಾಡುವಂತಹ ಪದ್ಧತಿ ನಡೆಯುತ್ತಿದೆ. ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ, ನೀರಿನ ಅಂಶವನ್ನು ತೋಟಕ್ಕೆ ಬಿಡುವುದರಿಂದ ಅಲ್ಲಿನ ಹೂವಿನ ತೋಟ ಮತ್ತು ತೋಟಗಾರಿಕೆ ಫಲವತ್ತಾಗಿ ಬೆಳೆಯುತ್ತಿದೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ ಎಂದು ಬೆಂಗಳೂರಿನ ದೇವನಹಳ್ಳಿ ಪುರಸಭೆ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ತಾವು ಅಧ್ಯಯನ ಪ್ರವಾಸದಲ್ಲಿ ನೋಡಿದ ಮಾಹಿತಿಯನ್ನು ವಿಜಯ್ ಕೊಡವೂರು ಹಂಚಿಕೊಂಡರು.
ಮುಂದಿನ ದಿನಗಳಲ್ಲಿ ಉಡುಪಿ ನಗರಸಭೆಯಲ್ಲಿಯೂ ಈ ರೀತಿಯ ವ್ಯವಸ್ಥೆಯನ್ನು ಮಾಡಿದರೆ ಉಡುಪಿಯ ಜೀವನದಿಯಾದ ಇಂದ್ರಾಣಿ ನದಿಯನ್ನು ರಕ್ಷಣೆ ಮಾಡಲು ಸಾಧ್ಯ. ಅದರ ಸುತ್ತ ಮುತ್ತಲೂ ಇರುವ ನೀರನ್ನು ರಕ್ಷಿಸಿ ಪಕ್ಕದಲ್ಲಿ ವಾಸವಾಗಿರುವಂತಹ ಜನರ ಆರೋಗ್ಯವನ್ನು ರಕ್ಷಣೆ ಮಾಡಲು ಸಾಧ್ಯವಾಗಬಹುದು. ಪವಿತ್ರವಾದ ನದಿಯನ್ನು ಮತ್ತೆ ಜೀವನದಿಯನ್ನಾಗಿ ಮಾಡಬಹುದು. ಈ ಮೂಲಕ ನದಿ ನೀರನ್ನು ಪಕ್ಕದಲ್ಲಿ ಇರುವ ಬಬ್ಬು ಸ್ವಾಮಿ ದೈವಸ್ಥಾನ, ನಾಗಬನಗಳು,ಮತ್ತು ದೇವಸ್ಥಾನಗಳಲ್ಲಿರುವ ದೇವರ ಮೂರ್ತಿಗಳಿಗೆ ಅಭಿಷೇಕ ಮಾಡಲು ಉಪಯೋಗ ಮಾಡಿದರೆ ಖಂಡಿತವಾಗಿಯೂ ಶ್ರದ್ಧಾ ಕೇಂದ್ರವನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದು ಅಧ್ಯಯನ ಪ್ರವಾಸವನ್ನು ವೀಕ್ಷಿಸಿದ ಅಧ್ಯಯನ ತಂಡದ ಸದಸ್ಯರು ಅಭಿಪ್ರಾಯ ಪಟ್ಟರು.