ತುಫಾನಿಗೆ ಸಿಲುಕಿದ್ದ18 ಮೀನುಗಾರರ ರಕ್ಷಣೆ

ಉಡುಪಿ: ಕಾರವಾರ ಮತ್ತು ಗೋವಾದ ಗಡಿಯಲ್ಲಿ ತುಫಾನಿಗೆ ಸಿಲುಕಿಕೊಂಡಿದ್ದ ಮಲ್ಪೆಯ ರಾಜ್‌ಕಿರಣ್‌ ಮತ್ತು ಮಂಗಳೂರಿನ ಮಹೇಲಿ ಬೋಟ್‌ನಲ್ಲಿದ್ದ ಒಟ್ಟು 18 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರವಾರ ಜಿಲ್ಲಾಧಿಕಾರಿ ಅವರಿಗೆ ತುರ್ತು ಸೂಚನೆ ನೀಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಹಾಗೆಯೇ ಅಗತ್ಯ ಬಿದ್ದರೆ ಹೆಲಿಕಾಪ್ಟರ್‌ ಸೇವೆಯನ್ನು ಬಳಸಿಕೊಳ್ಳುವಂತೆ ಅವರು ಸೂಚಿಸಿದ್ದರು.
ಅದರಂತೆ ಇದೀಗ ಎರಡು ಬೋಟ್‌ನಲ್ಲಿ ಇದ್ದ ಎಲ್ಲಾ 18 ಮೀನುಗಾರರನ್ನು ರಕ್ಷಿಸಿ ಮಂಗಳೂರು ಮತ್ತು ಮಲ್ಪೆಗೆ ಕರೆತರಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.