ಶರಾವತಿ ಯೋಜನೆ ಅಲ್ಲದೇ ರಾಜ್ಯದ ಮತ್ತೆರಡು ಪಂಪ್ಡ್ ಸ್ಟೋರೇಜ್ ಯೋಜನೆಗೆ ಪ್ರಸ್ತಾವ; ವಿ.ಎಂ.ವಿಜಯ್

ಕಾರವಾರ: ‘ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಅಲ್ಲದೇ ಬೆಳಗಾವಿ ಜಿಲ್ಲೆ ಸವದತ್ತಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪಂಪ್ಸ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವ ಇದೆ’ ಎಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯಪಾಲಕ ಎಂಜಿನಿಯರ್ ವಿ.ಎಂ.ವಿಜಯ್ ತಿಳಿಸಿದರು.

‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಯೋಜನೆಯ ಪ್ರಸ್ತಾವಕ್ಕೆ ಸಮ್ಮತಿ ಸಿಕ್ಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಅವಧಿಯಲ್ಲಿ ತಡೆರಹಿತ ವಿದ್ಯುತ್‌ ಪೂರೈಕೆಗೆ 2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಈ ಯೋಜನೆಗೆ ಪರಿಸರ, ವನ್ಯಜೀವಿ ಮತ್ತು ಅರಣ್ಯ ಅನುಮತಿ ಸಿಗುವುದು ಬಾಕಿ ಇದೆ’ ಎಂದರು.