ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 55 ಲಕ್ಷ ಉದ್ಯೋಗಾವಕಾಶ ಸೃಜನೆ; ಐದು ಇಂಟಿಗ್ರೇಟೆಡ್ ಅಕ್ವಾ ಪಾರ್ಕ್‌ ಸ್ಥಾಪನೆ

ನವದೆಹಲಿ: ಗುರುವಾರದಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೀನುಗಾರಿಕಾ ಕ್ಷೇತ್ರಕ್ಕೆ ನೀಡಲಾದ ಪ್ರೋತ್ಸಾಹದ ಬಗ್ಗೆ ಸದನಕ್ಕೆ ತಿಳಿಸಿದರು.

“ಮೀನುಗಾರರಿಗೆ ಸಹಾಯ ಮಾಡುವ ಮಹತ್ವವನ್ನು ಅರಿತು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಇದು ಒಳನಾಡು ಮತ್ತು ಜಲಚರಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. 2013-14 ರಿಂದ ಸಮುದ್ರಾಹಾರ ರಫ್ತು ಕೂಡ ದ್ವಿಗುಣಗೊಂಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅನುಷ್ಠಾನವನ್ನು ಪ್ರತಿ ಹೆಕ್ಟೇರ್‌ಗೆ 3 ರಿಂದ 5 ಟನ್‌ ಗಳವರೆಗೆ ಜಲಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ , ರಫ್ತನ್ನು 1 ಲಕ್ಷ ಕೋಟಿವರೆಗೆ ದ್ವಿಗುಣಗೊಳಿಸಿ ಮುಂದಿನ ದಿನಗಳಲ್ಲಿ 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಜೊತೆಗೆ 5 ಸಂಯೋಜಿತ ಆಕ್ವಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು” ಎಂದರು.

PMMSY ಯೋಜನೆಯಡಿಯಲ್ಲಿ ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಇಂಟಿಗ್ರೇಟೆಡ್ ಅಕ್ವಾ ಪಾರ್ಕ್‌ ಸ್ಥಾಪಿಸಲಾಗುವುದು. ಆಕ್ವಾ ಪಾರ್ಕ್ ಅನ್ನು ಸ್ಥಾಪಿಸುವುದು ಒಂದು ಅನನ್ಯ ಮತ್ತು ನವೀನ ಪರಿಕಲ್ಪನೆಯಾಗಿದ್ದು, ವಿವಿಧ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಒಂದೇ ಸ್ಥಳದಲ್ಲಿ ನಡೆಸಲಾಗುತ್ತದೆ.

ಅಕ್ವಾ ಪಾರ್ಕ್ ಅಡಿಯಲ್ಲಿ ಮೊಟ್ಟೆಕೇಂದ್ರ, ಬಯೋಫ್ಲೋಕ್ ಘಟಕ, ಮರುಬಳಕೆ ಘಟಕ, ಅಲಂಕಾರಿಕ ಮೀನುಗಾರಿಕೆ ಮೊಟ್ಟೆ ಮತ್ತು ಪಾಲನೆ ಘಟಕ, ಸಂಸ್ಕರಣಾ ಘಟಕ, ತರಬೇತಿ ಮತ್ತು ಕಾವು ಕೇಂದ್ರ, ಕ್ವಾರಂಟೈನ್ ಘಟಕ ಇತ್ಯಾದಿಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಗುಣಮಟ್ಟದ ಮೀನು ಉತ್ಪಾದನೆ, ಸಂಸ್ಕರಣೆ ಸಾಧ್ಯವಾಗುತ್ತದೆ. ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ಮುಂದಿನ ವರ್ಷಗಳಲ್ಲಿ ಇದರಿಂದ ಲಾಭ ದೊರೆಯುತ್ತದೆ.

ಅಕ್ವಾ ಪಾರ್ಕ್ ಅಡಿಯಲ್ಲಿ ಮೀನು ವಸ್ತುಸಂಗ್ರಹಾಲಯಗಳನ್ನೂ ನಿರ್ಮಿಸಲಾಗುತ್ತದೆ.

ನೀಲಿ ಕ್ರಾಂತಿ 2.0 ಆರ್ಥಿಕತೆಗಾಗಿ ಹವಾಮಾನ ಸ್ಥಿತಿಸ್ಥಾಪಕತ್ವಯೋಜನೆಗಳನ್ನು ಜಾರಿಗೊಳಿಸಲಾಗುವುದು.