ಮಲ್ಪೆ ಬಂದರಿನಲ್ಲಿ ಸಾರ್ವಜನಿಕರಿಗೆ ಮೀನು ಮಾರಾಟ ನಿಷೇಧ: ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಉಡುಪಿ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಚಿಲ್ಲರೆ ವ್ಯಾಪಾರ ಮಾಡಲು ಅವಕಾಶವಿಲ್ಲ. ಕೇವಲ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶ ಇದ್ದು, ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಮಲ್ಪೆ ಬಂದರಿನ ಒಳಗೆ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಮೀನು ಖರೀದಿಗೆ ಜಮಾಯಿಸುತ್ತಿರುವ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಯವರು ಇಂದು ಅಧಿಕಾರಿಗಳೊಂದಿಗೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಹಕರು ಮೀನು ಖರೀದಿಗೆ ಮಲ್ಪೆ ಬಂದರಿಗೆ ಹೋಗದಂತೆ ತಡೆಹಿಡಿಯಲು ತಪಾಸಣೆಯನ್ನು ಬಿಗಿಗೊಳಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು. ಆದರೂ ಕಾನೂನುಬಾಹಿರವಾಗಿ ಸಾರ್ವಜನಿಕರು ಮೀನು ಖರೀದಿಗೆ ಬಂದರಿಗೆ ಬಂದಲ್ಲಿ ಅಂತಹವರ ವಿರುದ್ದ ದೂರು ದಾಖಲಿಸಲಾಗುವುದು ಹಾಗೂ ಅವರ ವಾಹನವನ್ನು ಮುಟ್ಟುಗೋಲು ಹಾಕಲಾಗುವುದು. ಸಾರ್ವಜನಿಕರು ತಮ್ಮ ತಮ್ಮ ಸಮೀಪದ ಮಾರುಕಟ್ಟೆಗಳಲ್ಲಿ ಮೀನುಗಳನ್ನು ಖರೀದಿಸಲು ಅಥವಾ ಮನೆ ಮನೆಗೆ ಮೀನು ಮಾರಾಟ ಮಾಡಿಕೊಂಡು ಬರುವವರ ಬಳಿ ಮೀನು ಖರೀದಿಸಲು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಕುಮಾರ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ, ಶಕ್ತಿವೇಲು, ಪೊಲೀಸ್ ಉಪನಿರೀಕ್ಷಕರು ಮಲ್ಪೆ, ಸುಷ್ಮಾ, ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಇವರು ಉಪಸ್ಥಿತರಿದ್ದರು.