ಪ್ರೊ. ಬಿ. ಶಿವರಾಮ ಶೆಟ್ಟಿ ಸೀತಾರಾಮ ಕಟೀಲ್
ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ನೀಡಲಾಗುವ ಈ ಬಾರಿಯ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗಳಿಗೆ ಪ್ರೊ.ಬಿ.ಶಿವರಾಮ ಶೆಟ್ಟಿ ಹಾಗೂ ಸೀತಾರಾಮ ಕುಮಾರ್ ಕಟೀಲ್ ಅವರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಯುವವಾಹಿನಿಯ ಮಾಜಿ ಅಧ್ಯಕ್ಷ ಸಂತೋಷ ಕುಮಾರ್, ಹಿರಿಯ ಜನಪದ ವಿದ್ವಾಂಸರೂ, ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ಪ್ರೊ. ಬಿ.ಶಿವರಾಮ ಶೆಟ್ಟಿ ಅವರನ್ನು ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಾಗೂ ಯಕ್ಷಗಾನದ ಹಾಸ್ಯ ಕಲಾವಿದರೂ, ಹೂವಿನಕೋಲು, ಚಿಕ್ಕಮೇಳ ತಂಡಗಳ ನಿರ್ವಾಹಕರೂ ಆಗಿರುವ ಸೀತಾರಾಮ ಕಟೀಲ್ ಅವರನ್ನು ಜನಪದ ಕಲಾವಿದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನ.28ರ ಭಾನುವಾರ ಬೆಳಿಗ್ಗೆ 10:30ಕ್ಕೆ ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ತೆಂಕನಿಡಿಯೂರು ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸುರೇಶ್ ರೈ ಕೆ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದೇ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಜನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ.ರಾಜೀವ ಪೂಜಾರಿ ಅವರು ಉಪಸ್ಥಿತರಿರುವರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಪ್ರವೀಣ್ ಡಿ. ಪೂಜಾರಿ ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಡಿ.ಪೂಜಾರಿ, ಸಂಚಾಲಕ ಭಾಸ್ಕರ್ ಸುವರ್ಣ, ಮಾಜಿ ಅಧ್ಯಕ್ಷ ರಘುನಾಥ ಮಾಬಿಯಾನ್, ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.