ಸುನಿಲ್ ಪರ ಸಂಸದ ಗೋಪಾಲ ಶೆಟ್ಟಿ ಮಾಳ ಗ್ರಾಮದಲ್ಲಿ ಮತಯಾಚನೆ

ಕಾರ್ಕಳ: ಕಾರ್ಕಳ ಕ್ಷೇತ್ರದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಅಭಿವೃದ್ಧಿಯ ನವ ಶಕ್ತಿಯೇ ನಡೆದಿದೆ. ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಪ್ರತಿಮೆಯುಳ್ಳ ಥೀಮ್ ಪಾರ್ಕ್ ಗೆ ಭೇಟಿ ನೀಡಿದೆ. ನಿಜಕ್ಕೂ ಅದನ್ನು ಕಂಡು ದಿಗ್ಬ್ರಮೆಗೊಂಡೆ. ನೂರಕ್ಕೆ ನೂರು ದೂರದೃಷ್ಟಿಯ ದೃಷ್ಟಿಕೋನದ ಯೋಜನೆಯಿದು.

ಸಂಸ್ಕೃತಿ- ಪರಂಪರೆ ಎರಡೂ ಉಳಿಸುವ ಕಾರ್ಯ ಇಲ್ಲಿ ನಡೆದಿದೆ. ಇಂತಹ ದೂರದೃಷ್ಟಿಯ ಅಪರೂಪದ ಶಾಸಕ ಸುನಿಲರನ್ನು ಕ್ಷೇತ್ರದ ಜನ ಕಳೆದುಕೊಂಡು ತಪ್ಪು ಮಾಡಬಾರದು. ಹಾಗಾದಲ್ಲಿ ಅದು ಇಡೀ ಕಾರ್ಕಳ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಮುಂಬಯಿನ ಬೊರಿವಲಿಯ ಕ್ಷೇತ್ರದ ಸಂಸದ ಗೋಪಾಲ ಶೆಟ್ಟಿ ಅಭಿಪ್ರಾಯ ಪಟ್ಟರು.

ಮಾಳ ಗ್ರಾಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಪಾರ್ಕ್ ಉದ್ಘಾಟನೆ ದಿನ ನಾನು ಬರಬೇಕಿತ್ತು. ಮೋದಿಯವರ ಭೇಟಿ ನಿಮಿತ್ತ ಅಂದು ಸಾಧ್ಯವಾಗಿಲ್ಲ. ಥೀಂ ಪಾರ್ಕ್ ಡೆವಲಪ್‌ಮೆಂಟ್ ಬಗ್ಗೆ ಮುಂಬಯಿನ ಪ್ರತಿಯೊಬ್ಬರಿಗೂ ತಿಳಿದಿದೆ. ನನ್ನ ಜೀವನದಲ್ಲಿ ಮುಂಬಯಿನಂತಹ ನಗರದಲ್ಲಿ 25ಕ್ಕೂ ಅಧಿಕ ಮಹಾಪುರುಷರ ಪ್ರತಿಮೆ ಸ್ಥಾಪಿಸಿದ್ದು ಕಂಡಿದ್ದೇನೆ. ಅದು ಎಲ್ಲ ಸೇರಿದರೂ ಪರಶುರಾಮ ಥೀಂ ಪಾರ್ಕ್‌ಗೆ ಸಮವಾಗದು. ಮುಂದಿನ ಜನಾಂಗಕ್ಕೆ ಸನಾತನ ಧರ್ಮದ ಉಳಿವಿನ ಕಾರ್ಯ ಇಲ್ಲಿ ನಡೆದಿದೆ. ಇಂತಹ ಶ್ರಮಜೀವಿ, ಹೊಸತನ ಕಾಣುವ ಮತ್ತೊಬ್ಬ ಕನಸುಗಾರ ಶಾಸಕ ಸಿಗುವುದು ಕಷ್ಟ. ಹಾಗಾಗಿ ಕ್ಷೇತ್ರದ ಜನ ಮತ್ತೊಮ್ಮೆ ಸುನಿಲರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಕಟ್ಟ ಕಡೆ ವ್ಯಕ್ತಿಗೂ ನ್ಯಾಯ; ಸುನಿಲ್
ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಮಾತನಾಡಿ ಈದು- ಮಾಳದಂತಹ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ, ಸೇತುವೆ ನಿರ್ಮಾಣ, ಕಿಂಡಿಅಣೆಕಟ್ಟು, ವಿದ್ಯುತ್ ಸಮಸ್ಯೆಗೆ ಪರಿವರ್ತಕ, ಸಬ್ ಸ್ಟೇಶನ್, ಬಡವರಿಗೆ ಹಕ್ಜುಪತ್ರ ವಿತರಣೆ ಮೊದಲಾದ ಮೂಲಭೂತ ಸೌಕರ್ಯ ಕಲ್ಲಿಸಿ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸಿದ್ದೇನೆ. ಮತ್ತೊಮ್ಮೆ ಆಶಿರ್ವದಿಸಿದರೆ ಗ್ರಾಮಗಳ ಕಲ್ಯಾಣಕ್ಕೆ ಭರಪೂರ ಕೊಡುಗೆ ನೀಡುವುದಕ್ಕೆ ಅವಕಾಶವಾಗುತ್ತದೆ ಎಂದರು. ವೇದಿಕೆಯಲ್ಲಿ ಪ್ರಮುಖರಾದ ರೋಹಿತ್ ಹೆಗಡೆ ಎರ್ಮಲ್, ಹರೀಶ್ ಶೆಟ್ಟಿ ಎರ್ಮಲ್, ಸ್ಥಳಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.