ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಉಡುಪಿ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಉತ್ತರಪ್ರದೇಶದಲ್ಲಿ ನಡೆದ ಗೋಲಿಬಾರ್ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ ಉಡುಪಿ ಕಾಂಗ್ರೆಸ್ ಭವನದ  ಮುಂಭಾಗದಲ್ಲಿ ಧರಣಿ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜನರ ನೋವಿನಲ್ಲಿ ಭಾಗಿಯಾಗಲು ಹೋದ ಪ್ರಿಯಾಂಕ ಗಾಂಧಿ ಯನ್ನು ಯೋಗಿ ನೇತೃತ್ವದ ಬಿಜೆಪಿ ಸರಕಾರ ತಡೆದು ದಾರಿ ಮಧ್ಯೆ ನಿಲ್ಲಿಸಿ, ಬಂಧಿಸಿ ಅಮಾನವೀಯವಾಗಿ ವರ್ತಿಸಿದೆ. ಇಂತಹ ಹೇಯ ಕೃತ್ಯ ತೀವ್ರ ಖಂಡನೀಯವಾಗಿದೆ ಎಂದು ತಿಳಿಸಿದರು.

ಉದ್ಯಾವರ ನಾಗೇಶ್ ಕುಮಾರ್ ಅವರು, ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಗುಂಪು ದಾಳಿಗಳು ನಡೆಯುತ್ತಿವೆ. ಈ ಮೂಲಕ ಈ ದೇಶವನ್ನು ಧಾರ್ಮಿಕ ಧ್ರುವೀಕರಣದತ್ತ ಕೊಂಡೊಯ್ಯುವ ಹುನ್ನಾರ ನಡೆಸಲಾಗುತ್ತಿದೆ. ಈ ಕೃತ್ಯಗಳ ಹಿಂದೆ ದೇಶದ ಅಧಿಕಾರ ಹಿಡಿಯಲು ಹಿಡನ್ ಅಜೆಂಡಾ ಅಡಗಿದೆ ಎಂದು ದೂರಿದರು.
ಜ್ಯೋತಿ ಹೆಬ್ಬಾರ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡು ಕೆರೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ಜನಾರ್ದನ ಭಂರ್ಡಾಕರ್, ನರಸಿಂಹಮೂರ್ತಿ, ಚಂದ್ರಿಕಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಕುಶಲ್ ಶೆಟ್ಟಿ, ಸರಸು ಡಿ.ಬಂಗೇರ, ಭಾಸ್ಕರ ರಾವ್ ಕಿದಿಯೂರು, ಲೂವಿಸ್ ಲೋಬೊ, ಶಬ್ಬೀರ್ ಅಹ್ಮದ್, ಕಿರಣ್ ಕುಮಾರ್ ಉದ್ಯಾವರ ಮತ್ತಿತರು ಉಪಸ್ಥಿತರಿದ್ದರು.