ಬೆಂಗಳೂರು: ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್ಗಳಲ್ಲಿ ಪ್ರವೇಶ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಆಗಸ್ಟ್ 11 ರವರೆಗೆ ವಿಸ್ತರಿಸಲಾಗಿದೆ.
2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್ ಹಾಗೂ ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿ ಸಂಬಂಧ ದ್ವಿತೀಯ ಪಿಯುಸಿ/ 02 ವರ್ಷಗಳ ಐಟಿಐ ಟ್ರೇಡ್ನಲ್ಲಿ ಉತ್ತೀರ್ಣರಾಗಿರುವ ಮತ್ತು ಎಸ್. ಎಸ್.ಎಲ್. ಸಿ ಪರೀಕ್ಷೆ-3ರಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಹಾಗೂ ಒಂದು ವರ್ಷ ಸೇವಾನುಭವುಳ್ಳ ವೃತ್ತಿಪರ ಅಭ್ಯರ್ಥಿಗಳಿಗೂ ಸಹ ಅನ್ವಯವಾಗುವಂತೆ ಪ್ರವೇಶಾವಧಿಯನ್ನು ವಿಸ್ತರಿಸಬೇಕೆಂದು ಕೋರಿರುವುದನ್ನು ಪರಿಗಣಿಸಿ ಒಟ್ಟಾರೆ ಎಲ್ಲಾ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಮೇರೆಗೆ ಪ್ರಥಮ ಸೆಮಿಸ್ಟರ್ನಲ್ಲಿ / ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್/ವೃತ್ತಿಪರ ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್ನಲ್ಲಿ ಭರ್ತಿ ಆಗದ ಉಳಿಕೆ ಸೀಟುಗಳಿಗೆ ಅಂತಿಮ ಪ್ರವೇಶಾವಧಿಯನ್ನು ವಿಸ್ತರಿಸಿ ಅನುಮತಿ ನೀಡಲಾಗಿದೆ.
ವಿಸ್ತರಿಸಲಾದ ಅವಧಿಯಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳ ಸಂಬಂಧದಲ್ಲಿ ನಿಯಮಾನುಸಾರ ಕನಿಷ್ಠ ಹಾಜರಾತಿಯನ್ನು ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ. ಅಭ್ಯರ್ಥಿಗಳಿಗೆ ಪ್ರಥಮ/ತೃತೀಯ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸಲು ಸೂಕ್ತ ವ್ಯವಸ್ಥೆಯನ್ನು ಪ್ರಾಂಶುಪಾಲರು ಮಾಡಬೇಕು.
ವಿಸ್ತರಿಸಲಾದ ಅವಧಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವುದರ ಮೂಲಕ ಪಠ್ಯಕ್ರಮದನ್ವಯ ನಿಗಧಿತ ಪಾಠ ಪ್ರವಚನಗಳನ್ನು ಮುಗಿಸುವಲ್ಲಿ ಕ್ರಮತೆಗೆದುಕೊಳ್ಳಬೇಕು. ಪ್ರಥಮ ಡಿಪ್ಲೋಮಾ ಪ್ರವೇಶಾವಧಿಯನ್ನು ಪುನಃ ವಿಸ್ತರಿಸಲಾಗುವುದಿಲ್ಲ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












