ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ: ವಿರೋಧಪಕ್ಷಗಳಿಂದ ಪ್ರತಿಭಟನೆ

ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸಂಸದ ಕಿರೋಡಿ ಲಾಲ್ ಮೀನಾ ಶುಕ್ರವಾರ ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದರು. ವಿರೋಧ ಪಕ್ಷದ ಸದಸ್ಯರು ಈ ಕ್ರಮವನ್ನು ವಿರೋಧಿಸಿರು ಮತ್ತು ಪ್ರಸ್ತಾವಿತ ಮಸೂದೆಗೆ ಮತದಾನ ನಡೆಸುವಂತೆ ಕೇಳಿಕೊಂಡರು.

ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸುವ ಮೂಲಕ, ಏಕರೂಪ ನಾಗರಿಕ ಸಂಹಿತೆಯು ಮದುವೆ, ದತ್ತು, ಪಿತ್ರಾರ್ಜಿತ, ಉತ್ತರಾಧಿಕಾರ ಮತ್ತು ವಿಚ್ಛೇದನದವರೆಗಿನ ಎಲ್ಲ ವಿಷಯಗಳ ಮೇಲೆ ಸಾಮಾನ್ಯ ಕಾನೂನುಗಳ ನಿಯಮಗಳೊಂದಿಗೆ ಯಾವುದೇ ಸಮುದಾಯಗಳನ್ನು ಲೆಕ್ಕಿಸದೆ ದೇಶದ ನಾಗರಿಕರನ್ನು ಸಮಾನವಾಗಿ ಕಾಣಲು ಉದ್ದೇಶಿಸಿದೆ.

ಮೇಲ್ಮನೆಯಲ್ಲಿ ಮೀನಾ ಅವರು ಮಂಡಿಸಿದ ಮಸೂದೆಯು ಯುಸಿಸಿ ಅನ್ನು ಸಿದ್ಧಪಡಿಸಲು ಸಮಿತಿಯನ್ನು ರಚಿಸಲು ಕೇಳಿಕೊಂಡಿದೆ. ಮಸೂದೆಯನ್ನು ದೇಶದಾದ್ಯಂತ ಜಾರಿಗೊಳಿಸುವ ಉದ್ದೇಶದಿಂದ ಮಂಡಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ರಾಷ್ಟ್ರೀಯ ತಪಾಸಣೆ ಮತ್ತು ತನಿಖಾ ಸಮಿತಿಯ ರಚನೆಯನ್ನು ಮಸೂದೆ ಉಲ್ಲೇಖಿಸಿದೆ.

ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐ(ಎಂ) ನ ವಿರೋಧ ಪಕ್ಷದ ಸದಸ್ಯರು ದೇಶದ ಸಾಮಾಜಿಕ ರಚನೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ‘ನಾಶಗೊಳಿಸುವ’ ಅಂಶವಾಗಿ ಮಸೂದೆಯನ್ನು ಪರಿಚಯಿಸುವುದನ್ನು ಖಂಡಿಸಿದರು. ಪ್ರತಿಪಕ್ಷವು ಮಸೂದೆಯನ್ನು ಹಿಂಪಡೆಯಲು ಕೋರಿತು. ಆದರೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಯುಸಿಸಿಯಲ್ಲಿ ಮಸೂದೆಯನ್ನು ಮಂಡಿಸಲು ಮತ್ತು ಮತ ವಿಭಜನೆಗೆ ಕರೆ ನೀಡಿದರು.

ಮಸೂದೆ ಪರವಾಗಿ 63 ಮತ್ತು ವಿರುದ್ಧ 23 ಮತಗಳು ಬಂದವು.

ಭಾರತದ ಸಂವಿಧಾನದ 44 ನೇ ವಿಧಿಯು ರಾಷ್ಟ್ರೀಯ ನೀತಿಯನ್ನು ರೂಪಿಸುವಾಗ ಭಾರತವು ಎಲ್ಲಾ ಭಾರತೀಯ ನಾಗರಿಕರಿಗೆ ನಿರ್ದೇಶನ ತತ್ವಗಳು ಮತ್ತು ಸಾಮಾನ್ಯ ಕಾನೂನನ್ನು ಅನ್ವಯಿಸತಕ್ಕದ್ದು ಎಂದು ನಿರೀಕ್ಷಿಸುತ್ತದೆ.