ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ  ಶ್ರದ್ಧಾಂಜಲಿ ಶಾಂತಿ, ಪ್ರೀತಿ ಅಹಿಂಸೆಯಿಂದ ಜಗತ್ತು ಗೆಲ್ಲಲು ಸಾಧ್ಯ: ಜೆರಾಲ್ಡ್ ಐಸಾಕ್ 

ಉಡುಪಿ: ಶ್ರೀಲಂಕಾದಲ್ಲಿ ಉಗ್ರರ ಸ್ಫೋಟಕ್ಕೆ ಮೃತರಾದವರಿಗೆ ಗುರುವಾರ ನಗರದ ಶೋಕಮಾತ ಇಗರ್ಜಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರ ಕೃತ್ಯಗಳಿಂದ ಜಗತ್ತನ್ನು ನಾಶ ಮಾಡಲು ಸಾಧ್ಯವಿಲ್ಲ. ಬದಲಾಗಿ ಶಾಂತಿ, ಪ್ರೀತಿ, ಅಹಿಂಸೆ ಹಾಗೂ ಕ್ಷಮೆಯ ಮೂಲಕ ಜಗತ್ತನ್ನು, ಮಾನವ ಕುಲವನ್ನು ಜಯಿಸಲು ಸಾಧ್ಯ’ ಎಂದರು.
ತಮ್ಮದಲ್ಲದ ತಪ್ಪಿಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸುತ್ತದೆ. ಬದುಕು ಕಟ್ಟಲು ಎಷ್ಟ ಎಂಬ ಸಂಗತಿಯನ್ನು ಬದುಕು ನಾಶಮಾಡಲು ಹೊರಟವರು ಅರ್ಥ ಮಾಡಿಕೊಂಡಿದ್ದರೆ ಇಂತಹ ನೀಚ ಕೃತ್ಯಗಳು ಸಂಭವಿಸುತ್ತಿರಲಿಲ್ಲ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಬ್ಯಾಪ್ಟಿಸ್ಟ್ ಮಿನೇಜಸ್, ಸಿಎಸ್‌ಐ ಸಭೆಯ ಸ್ಟೀವನ್ ಸರ್ವೋತ್ತಮ, ನೋಯೆಲ್ ಕರ್ಕಡ, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರು ವಿಲಿಯಂ ಮಾರ್ಟಿಸ್, ಲಾರೆನ್ಸ್ ಡಿಸೋಜಾ, ಫರ್ಡಿನಾಂಡ್ ಗೊನ್ಸಾಲ್ವಿಸ್, ಸ್ಟೀವನ್ ಡಿಸೋಜಾ, ವಿನ್ಸೆಂಟ್ ಕುವೆಲ್ಲೊ, ಫ್ರಾನ್ಸಿಸ್ ಕರ್ನೆಲಿಯೋ, ವಿಜಯ್ ಡಿಸೋಜಾ, ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಆಲ್ಫೋನ್ಸ್ ಡಿಲೀಮಾ, ರೋಯ್ಸನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.