ಕೊರೊನಾ ಸೋಂಕಿತರಿಗೆ ಅವಶ್ಯವಿರುವ ವೆಂಟಿಲೇಟರ್, ಲಸಿಕೆ ಖರೀದಿಗೆ ಆದ್ಯತೆ ಕೊಡಿ: ರಾಕೇಶ್ ಬಿರ್ತಿ

ಉಡುಪಿ: ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಸಿಗದೆ ಸೋಂಕಿತರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಸಿಜನ್ ನ, ವೆಂಟಿಲೇಟರ್ ಗಳ ಸಮರ್ಪಕ ಪೂರೈಕೆಗೆ ಒತ್ತು ನೀಡುವುದರ ಜತೆಗೆ ಲಸಿಕೆ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಕೇಶ್ ಬಿರ್ತಿ ಆಗ್ರಹಿಸಿದ್ದಾರೆ.

ಪ್ರಧಾನಿ ಅವರು ಸೋಂಕಿತರಿಗೆ ಅವಶ್ಯವಿರುವ ರೆಮ್ಡೆಸಿವಿಯರ್, ವೆಂಟಿಲೇಟರ್ ನ ತುರ್ತು ಖರೀದಿಗೆ ಮುಂದಾಗಬೇಕು. ಲಸಿಕೆ ತಯಾರಿಕಾ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ ಲಸಿಕೆ ತಯಾರಿಕೆಗೆ ಎದುರಾಗಿರುವ ಕಾನೂನು ತೊಡಕನ್ನು ನಿವಾರಿಸಬೇಕು. ತಾತ್ಕಾಲಿಕ ಹೆಚ್ಚುವರಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.