ನವದೆಹಲಿ: ಮೇ 19ರಿಂದ 21ರವರೆಗೆ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಜಪಾನ್‌ಗೆ ಪ್ರಯಾಣಿಸಿದರು.
ಪ್ರಧಾನಿ ಮೋದಿ ವಿಮಾನ ಏರುತ್ತಿರುವ ವಿಡಿಯೊವನ್ನು ಅವರ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಜಪಾನ್ ಪ್ರವಾಸದ ನಂತರ ಮೋದಿ ಅವರು ಪಪುವಾ ನ್ಯೂಗಿನಿಗೆ ಪ್ರಯಾಣಿಸಲಿದ್ದು, ಅಲ್ಲಿ ಪ್ರಧಾನಿ ಜೇಮ್ಸ್ ಅವರೊಂದಿಗೆ ಜಂಟಿಯಾಗಿ ಭಾರತ–ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ) ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
22 ರಿಂದ 24 ರವರೆಗೆ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿರುವ ಮೋದಿ, ದ್ವಿಪಕ್ಷೀಯ ಸಂಬಂಧ ಬಲರ್ವಧನೆ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಜತೆ ಚರ್ಚೆ ನಡೆಸುವರು.
ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಮೋದಿ ಅವರು 40 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.