ನವದೆಹಲಿ :ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಜುಲೈ 13 ಮತ್ತು 14ರಂದು ಪ್ಯಾರಿಸ್ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಲಿದ್ದಾರೆ.ಪ್ರಧಾನಿ ಮೋದಿ ಅವರ ಎರಡು ದಿನಗಳ ಅವಧಿಯ ವಿದೇಶ ಪ್ರವಾಸ ಆರಂಭವಾಗಲಿದೆ. ಪ್ರಧಾನಿ ಫ್ರಾನ್ಸ್ ಹಾಗೂ ಯುಎಇಗೆ ಭೇಟಿ ನೀಡಲಿದ್ದಾರೆ
ಪ್ಯಾರಿಸ್ನಲ್ಲಿ ಮೋದಿ ಅವರು ಸೆನೆಟ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಅಧ್ಯಕ್ಷರನ್ನು ಕೂಡ ಭೇಟಿಯಾಗಲಿದ್ದಾರೆ. ಫ್ರಾನ್ಸ್ನಲ್ಲಿರುವ ಭಾರತೀಯ ಮೂಲದ ನಿವಾಸಿಗಳು, ಭಾರತೀಯ ಮತ್ತು ಫ್ರೆಂಚ್ ಕಂಪನಿಗಳ ಸಿಇಒಗಳು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಪ್ರತ್ಯೇಕವಾಗಿ ಅವರು ಸಂವಾದ ನಡೆಸಲಿದ್ದಾರೆ. ಈ ವರ್ಷ ಭಾರತ-ಫ್ರಾನ್ಸ್ ಮಧ್ಯದ ರಚನಾತ್ಮಕ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವಾಗಿದೆ.
ಗುರುವಾರ ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯಲಿರುವ ಬಾಸ್ಟಿಲ್ ಡೇ ಪರೇಡ್ನಲ್ಲಿ ಪ್ರಧಾನ ಮಂತ್ರಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತುಕಡಿ ಕೂಡ ಭಾಗವಹಿಸಲಿದೆ. ಮೋದಿ ಅವರು ಮ್ಯಾಕ್ರನ್ ಅವರೊಂದಿಗೆ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಫ್ರೆಂಚ್ ಅಧ್ಯಕ್ಷರು ಭಾರತದ ಪ್ರಧಾನ ಮಂತ್ರಿಯ ಗೌರವಾರ್ಥವಾಗಿ ಸರ್ಕಾರಿ ಔತಣಕೂಟ ಮತ್ತು ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ.
ಕಳೆದ ತಿಂಗಳು ಅಮೇರಿಕಾದಿಂದ ಹಿಂದಿರುಗುವಾಗ ಪ್ರಧಾನಿ ಮೋದಿ ಅವರು ಈಜಿಪ್ಟ್ಗೆ ದ್ವಿಪಕ್ಷೀಯ ಭೇಟಿ ನೀಡಿದ್ದರು. ಇದು ಮಧ್ಯಪ್ರಾಚ್ಯದೊಂದಿಗೆ ಭಾರತದ ಹೆಚ್ಚುತ್ತಿರುವ ಬಾಂಧವ್ಯವನ್ನು ಸೂಚಿಸುತ್ತದೆ. ಅಲ್ಲದೆ ಪ್ರಧಾನಿ ಮೋದಿ ಅವರು ಸೌದಿಯ ಮಾಜಿ ಕಾನೂನು ಮಂತ್ರಿ ಮತ್ತು ಮುಸ್ಲಿಂ ವರ್ಲ್ಡ್ ಲೀಗ್ನ ಪ್ರಧಾನ ಕಾರ್ಯದರ್ಶಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸಾ ಅವರನ್ನು ಮಂಗಳವಾರ ಭೇಟಿಯಾಗಿದ್ದರು ಮತ್ತು ಇಸ್ಲಾಮಿಕ್ ಪ್ರಪಂಚದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ಡಾ. ಅಲ್-ಇಸ್ಸಾ ಅವರು ಮಧ್ಯಮ ಮಾರ್ಗದ ಇಸ್ಲಾಂ ಧರ್ಮದ ಪ್ರತಿಪಾದಕರಾಗಿದ್ದಾರೆ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರಿಗೆ ತುಂಬಾ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತದೆ. ಭಾರತ-ಫ್ರಾನ್ಸ್-ಯುಎಇಗಳು ತ್ರಿಪಕ್ಷೀಯ ಸಹಕಾರ ಉಪಕ್ರಮದ ಭಾಗವಾಗಿವೆ. ಸೆಪ್ಟೆಂಬರ್ 19, 2022 ರಂದು ನ್ಯೂಯಾರ್ಕ್ನಲ್ಲಿ ಈ ತ್ರಿಪಕ್ಷೀಯ ಸಹಕಾರ ಒಪ್ಪಂದವನ್ನು ಘೋಷಿಸಲಾಯಿತು.
ಶುಕ್ರವಾರ ಪ್ರಧಾನಿ ಅಬುಧಾಬಿಗೆ ಆಗಮಿಸಲಿದ್ದು, ಅಲ್ಲಿ ಅವರು ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ನಿರಂತರವಾಗಿ ಬಲಗೊಳ್ಳುತ್ತಿದೆ ಮತ್ತು ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಫಿನ್ಟೆಕ್, ರಕ್ಷಣೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳನ್ನು ಗುರುತಿಸಲು ಮೋದಿ ಅವರ ಭೇಟಿ ಒಂದು ಅವಕಾಶವಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.