ತನ್ನ 30 ವರ್ಷಗಳ ಪ್ರತಿಜ್ಞೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಇದೇ ಮೊದಲ ಬಾರಿಗೆ ಅಯೋಧ್ಯೆಯ ಲಕ್ಷದೀಪೋತ್ಸವದಲ್ಲಿ ಭಾಗಿ

ಅಯೋಧ್ಯಾ: 1990 ಸೆಪ್ಟೆಂಬರ್ 25 ರಂದು ಸೋಮನಾಥ-ಅಯೋಧ್ಯೆ ರಾಮ ರಥಯಾತ್ರೆ ಪ್ರಾರಂಭವಾಯಿತು. ಆಗ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ನಿಂದ ಹೊರಡುವ ಯಾತ್ರೆಯ ಸಾರಥಿಯಾಗಿದ್ದರು. ಈ ಏಕತಾ ಯಾತ್ರೆಯು ಕಾಶ್ಮೀರದ ಲಾಲ್ ಚೌಕ್‌ನಲ್ಲಿ 26 ಜನವರಿ 1992 ರಂದು ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಂಡಿತು.

Image
ಕೃಪೆ: ಮೋದಿ ಆರ್ಕೈವ್ಸ್/ಟ್ವಿಟರ್

ಇದಕ್ಕೂ ಕೆಲ ದಿನಗಳ ಮುನ್ನ ಜನವರಿ 14 ರಂದು, ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದವನ್ನು ಕೋರಿದ ಬಳಿಕ ಮೋದಿಯವರು “ರಾಮ ಮಂದಿರ ನಿರ್ಮಾಣ ಪ್ರಾರಂಭವಾದಾಗ ಮಾತ್ರ ನಾನು ಹಿಂತಿರುಗುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು(ಕೃಪೆ: ಮೋದಿ ಆರ್ಕೈವ್ಸ್). ಆ ಪ್ರತಿಜ್ಞೆಗೆ 30 ವರ್ಷಗಳು ಸಂದಿವೆ. ಈಗ್ಗೆ ಎರಡು ವರ್ಷಗಳ ಹಿಂದೆ, 5 ಆಗಸ್ಟ್ 2020 ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮಂದಿರಕ್ಕೆ ಮೋದಿಯವರು ಅಡಿಪಾಯ ಹಾಕಿ ಪ್ರತಿಜ್ಞೆ ಪೂರ್ಣಗೊಳಿಸಿ ಇಂದು ಅಯೋಧ್ಯೆಯಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾಗಿದ್ದಾರೆ.

ಸುಮಾರು 22,000 ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರು 17 ಲಕ್ಷ ಹಣತೆಗಳನ್ನು ಜೋಡಿಸಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯನ್ನು ಝಗಮಗಿಸಿದ್ದು, ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಯೋಧ್ಯೆ ದೇಶದ ಉತ್ಕೃಷ್ಟ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲದಲ್ಲಿ ಶ್ರೀರಾಮನಂತಹ ಸಂಕಲ್ಪ ಶಕ್ತಿ ದೇಶವನ್ನು ಉನ್ನತಿಗೇರಿಸಲಿದೆ. ಶ್ರೀರಾಮ ತನ್ನ ಆಚಾರ ವಿಚಾರ ವಚನ ಶಾಸನಗಳೆಲ್ಲದರಲ್ಲಿಯೂ ಎಲ್ಲರ ಒಳಗೊಳ್ಳುವಿಕೆ ಮತ್ತು ಎಲ್ಲರ ಅಭಿವೃದ್ದಿಯ ಮಂತ್ರದ ಪ್ರೇರಣೆಯಾಗಿದ್ದಾರೆ ಮತ್ತು ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯಾಸದ ಆಧಾರವಾಗಿದ್ದಾರೆ ಎಂದರು.

ನಮ್ಮ ಸಂವಿಧಾನದ ಮೂಲಪ್ರತಿಯಲ್ಲಿ ಭಗವಾನ್ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನರ ಚಿತ್ರ ಅಂಕಿತವಾಗಿದೆ. ಸಂವಿಧಾನದ ಆ ಪೃಷ್ಠವೂ ಮೌಲಿಕ ಅಧಿಕಾರದ ಬಗ್ಗೆ ಹೇಳುತ್ತದೆ ಮತ್ತು ಅದರ ಜೊತೆಗಿರುವ ಕರ್ತವ್ಯಗಳ ಬಗ್ಗೆಯೂ ನೆನಪಿಸುತ್ತದೆ. ರಾಮ ಯಾರನ್ನೂ ಹಿಂದೆ ಬಿಡುವುದಿಲ್ಲ, ರಾಮ ಕರ್ತವ್ಯ ಭಾವನೆಯಿಂದ ವಿಮುಖನಾಗುವುದಿಲ್ಲ ಎಂದು ಮೋದಿ ಹೇಳಿದರು.

ಉತ್ತರ ಪ್ರದೇಶದ ಅವಧ್ ವಿಶ್ವ ವಿದ್ಯಾಲಯ, ಅಧೀನ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಉಪಕುಲಪತಿ ಅಖಿಲೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಸರಯೂ ನದೀ ತಟದ ರಾಮ್ ಕಿ ಪೈದಿ ನಲ್ಲಿ ಆಯೋಜಿಸಲಾದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

ಶನಿವಾರ ಬೆಳಗ್ಗಿನಿಂದ ಸಾಯಂಕಾಲದವರೆಗೆ ಹಣತೆಗಳನ್ನು ಜೋಡಿಸಲಾಗಿದೆ. ಪ್ರತಿ ಸ್ವಯಂ ಸೇವಕರಿಗೂ 85-90 ಹಣತೆಗಳನ್ನು ಜೋಡಿಸುವ ಗುರಿ ನಿಗದಿ ಪಡಿಸಲಾಗಿತ್ತು. ಸ್ವಯಂ ಸೇವಕರೆಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Image

ಘಾಟ್ ಸಂಖ್ಯೆ ಹತ್ತರಲ್ಲಿ ಹಣತೆಗಳ ಮೂಲಕ ರಾಮಾಯಣವನ್ನು ಚಿತ್ರಿಸಲಾಗಿದೆ. ಇಲ್ಲಿನ 37 ಘಾಟ್ ಗಳಲ್ಲಿ 17 ಲಕ್ಷ ಹಣತೆಗಳನ್ನು ಜೋಡಿಸಿರುವುದನ್ನು ದಾಖಲಿಸಲು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನವರು ಅಗಮಿಸಿದ್ದು, ಹಣತೆಗಳ ಸಂಖ್ಯೆಯನ್ನು ಲೆಕ್ಕ ಹಾಕಿದ್ದಾರೆ.