ನೂತನ ಸಂಸತ್ ಭವನ ಕಟ್ಟಡದಲ್ಲಿ “ಸೆಂಗೋಲ್” ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ನವದೆಹಲಿ: ಇಂದು ಬೆಳಿಗ್ಗೆ ಹೊಸ ಸಂಸತ್ ಸದನದ ಆವರಣಕ್ಕೆ ಆಗಮಿಸಿದ ಮೋದಿ, ಮಹಾತ್ಮ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ನೂತನ ಕಟ್ಟಡದ ಉದ್ಘಾಟನೆಯ ಪೂಜೆಯಲ್ಲಿ ಪಾಲ್ಗೊಂಡರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಕಟ್ಟಡಾದ ಉದ್ಘಾಟನೆ ನಡೆಸಬೇಕು ಎಂದು ಒತ್ತಾಯಿಸಿ ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನದ ಉದ್ಘಾಟನೆಗೆ ಚಾಲನೆ ನೀಡಿದರು. ನೂತನ ಕಟ್ಟಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ.

Image

ಇದಕ್ಕೂ ಮುನ್ನ ಶನಿವಾರ, ಅಧೀನಮ್ ಸಂಸ್ಥಾನ ಅರ್ಚಕರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಮುನ್ನಾದಿನದಂದು ಪವಿತ್ರ ರಾಜದಂಡ ‘ಸೆಂಗೊಲ್’ ಅನ್ನು ಅವರಿಗೆ ಹಸ್ತಾಂತರಿಸಿದರು.

Image

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಪಿಎಂ ಮೋದಿ ಹೊಸ ಸಂಸತ್ತಿನ ಕಟ್ಟಡದಲ್ಲಿ ನಡೆಯುತ್ತಿರುವ ‘ಸರ್ವ-ಧರ್ಮ’ ಪ್ರಾರ್ಥನಾ ಸಮಾರಂಭದಲ್ಲಿ ಪಾಲ್ಗೊಂಡರು. ನೂತನ ಸಂಸತ್ ಭವನದ ನಿರ್ಮಾಣ ಮತ್ತು ಅಭಿವೃದ್ಧಿಗೆ ಸಹಕರಿಸಿದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು. ನೂತನ ಸಂಸತ್ ಭವನದ ಉದ್ಘಾಟನೆ ನಿಮಿತ್ತ ಫಲಕವನ್ನು ಅನಾವರಣಗೊಳಿಸಿದರು.

Image

ಇಂದು ಬೆಳಿಗ್ಗೆ ಸೆಂಗೋಲ್ ಅನ್ನು ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಷ್ಠಾಪಿಸಿದರು.

ಹೊಸ ಲೋಕಸಭಾ ಕೊಠಡಿಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದರೆ, ಮತ್ತೊಂದೆಡೆ, ಹೊಸ ರಾಜ್ಯಸಭಾ ಕೊಠಡಿಯನ್ನು ರಾಷ್ಟ್ರೀಯ ಪುಷ್ಪವಾದ ಕಮಲದ ಆಕಾರದಲ್ಲಿ ರಚಿಸಲಾಗಿದೆ.

Image

ಲೋಕಸಭೆಯ ಬೃಹತ್ ಗೋಡೆಗಳು ಮತ್ತು ರಾಜ್ಯಸಭಾ ಕೊಠಡಿಗಳು ಮತ್ತು ಹೊಸ ಕಟ್ಟಡದ ಹೊರಾಂಗಣದಲ್ಲಿರುವ ಅಶೋಕ ಚಕ್ರದ ಸಾಮಗ್ರಿಗಳನ್ನು ಇಂದೋರ್‌ನಿಂದ ಹಾಗೂ ಅಶೋಕ ಲಾಂಛನಕ್ಕಾಗಿ ವಸ್ತುಗಳನ್ನು ಔರಂಗಾಬಾದ್ ಮತ್ತು ಜೈಪುರದಿಂದ ಸಂಗ್ರಹಿಸಲಾಗಿದೆ.