ಆಗಸ್ಟ್​ 28 ರಂದು 51 ಸಾವಿರ ಫಲಾನುಭವಿಗಳಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ : ರೋಜ್​ಗಾರ್​ ಮೇಳ

ನವದೆಹಲಿ : ಸರ್ಕಾರಿ ಉದ್ಯೋಗಗಳ ಸೃಷ್ಟಿ ಮತ್ತು ಯುವಕರಿಗೆ ಹುದ್ದೆಗಳನ್ನು ನೀಡುವ ಅಭಿಯಾನವಾದ ‘ರೋಜ್​ಗಾರ್​ ಮೇಳ’ದ ಅಡಿಯಲ್ಲಿ ಆಗಸ್ಟ್​ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 51 ಸಾವಿರ ನೇಮಕಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ

ಪಂಜಾಬ್​ನ ಜಲಂಧರ್​ ಸೇರಿದಂತೆ 45 ಕಡೆಗಳಲ್ಲಿ ನಡೆಯುವ ರೋಜ್​ಗಾರ್​ ಮೇಳದಲ್ಲಿ 8 ನೇ ಹಂತದ ನೇಮಕಾತಿ ಪತ್ರಗಳ ವಿತರಣೆ ನಡೆಯಲಿದೆ. ಮೇಳದಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನೇರವಾಗಿ ಭಾಗಿಯಾದರೆ, ಪ್ರಧಾನಿ ಮೋದಿ ಅವರು ಆನ್‌ಲೈನ್‌ನಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರೋಜ್​ಗಾರ್​ ಮೇಳದ 8ನೇ ಕಂತಿನ 51 ಸಾವಿರ ಫಲಾನುಭವಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಲಿದ್ದಾರೆ.

8ನೇ ಕಂತಿನ ರೋಜ್​ಗಾರ್​ ಮೇಳ: ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಜುಲೈ 22 ರಂದು ವಿಡಿಯೋ ಕಾನ್ಫ್​ರೆನ್ಸ್​ ಮೂಲಕ 70,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಆಜಾದಿ ಕಾ ಅಮೃತ್ ಮಹೋತ್ಸವ’ದ ಸಂದರ್ಭದಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವಾಗ ಸರ್ಕಾರಿ ನೌಕರನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಈ ದೇಶದ ಜನರು ಭಾರತವನ್ನು ಒಗ್ಗೂಡಿಸಲು ಸಂಕಲ್ಪ ಮಾಡಿದ್ದಾರೆ. ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ಅವರು ಅಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

ಏನಿದು ರೋಜ್​ಗಾರ್​ ಮೇಳ?: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಮಾಡುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಬಂದ ಬಳಿಕ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿಪಕ್ಷಗಳು ಈಗಾಗಲೇ ಸಾಕಷ್ಟು ಟೀಕೆಗಳನ್ನು ಮಾಡಿವೆ. ಈ ಹಿನ್ನೆಲೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೋಜ್​ಗಾರ್​ ಮೇಳ ಪ್ರಾರಂಭಿಸಿದೆ.

ಕಳೆದ ವರ್ಷ ಅಕ್ಟೋಬರ್ 22 ರಂದು ಪ್ರಧಾನಿ ಮೋದಿ ಅವರು ‘ರೋಜ್‌ಗಾರ್ ಮೇಳ’ಕ್ಕೆ ಚಾಲನೆ ನೀಡಿದ್ದರು. (ಎಎನ್​ಐ)ಮುಂದಿನ 25 ವರ್ಷಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ. ಆರ್ಥಿಕ ತಜ್ಞರು ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದ ಅಗ್ರ 3ನೇ ಆರ್ಥಿಕ ದೇಶವಾಗಲಿದೆ ಎಂದು ಹೇಳುತ್ತಿದ್ದಾರೆ. ಇದರರ್ಥ ಉದ್ಯೋಗಾವಕಾಶಗಳು ಮತ್ತು ನಾಗರಿಕರ ತಲಾ ಆದಾಯವು ಹೆಚ್ಚಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಗಡಿ ಭದ್ರತಾ ಪಡೆ (ಬಿಎಸ್​ಎಫ್​​) ಸೇರಿದಂತೆ ವಿವಿಧ ಇಲಾಖೆಗಳಿಗೆ ಆಯ್ಕೆಯಾದ 51 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ‘ಉದ್ಯೋಗಗಳ ಮೂಲಕ ಸಬಲೀಕರಣ’ ಘೋಷವಾಕ್ಯದಡಿ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು. ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅದೇ ದಿನ ಪಂಜಾಬ್‌ನಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.