ಕ್ಯಾನ್ಸರ್ ಔಷಧಗಳ ದರ ಶೇ.70ರವರೆಗೆ ಇಳಿಕೆ: ನವೆಂಬರ್ 9ರಿಂದ ಹೊಸ ದರ ಜಾರಿ

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದ (NPPA) ಆದೇಶದ ಮೇರೆಗೆ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತನ್ನ ಪ್ರಮುಖ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು (MRP) ಶೇ.70ರವರೆಗೆ ಕಡಿತಗೊಳಿಸಿದೆ. ಈ ಕುರಿತು ಸಂಸ್ಥೆಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಪರಿಷ್ಕೃತ ದರಗಳು ನವೆಂಬರ್ 9ರಿಂದ ಜಾರಿಗೆ ಬರಲಿವೆ. ಇದರ ಅನ್ವಯ, ಸಂಸ್ಥೆ ಉತ್ಪಾದಿಸುವ ಜೀವ ರಕ್ಷಕ ಕ್ಯಾನ್ಸರ್ ಇಂಜೆಕ್ಷನ್‌ಗಳು, ಮಾತ್ರೆಗಳು ಹಾಗೂ ಕ್ಯಾಪ್ಸೂಲ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಇದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಹಣ ವ್ಯಯಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ನಿರೀಕ್ಷೆಯಿದೆ.

ಔಷಧಗಳ ಮಾರಾಟ ಜಾಲದಲ್ಲಿ ವ್ಯಾಪಾರ ಲಾಭಾಂಶ ಹೆಚ್ಚಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ ಎನ್‌ಪಿಪಿಎ, ವ್ಯಾಪಾರ ಲಾಭಾಂಶಕ್ಕೆ ಗರಿಷ್ಠ ಶೇ.30ರ ಮಿತಿ ವಿಧಿಸಿದೆ. ಈ ಕ್ರಮದ ಭಾಗವಾಗಿ ಔಷಧಗಳ ದರ ಇಳಿಕೆಗೆ ಸೂಚನೆ ನೀಡಲಾಗಿದೆ.

ದರ ಕಡಿತದ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ ತಲುಪಿಸುವಂತೆ ಟೊರೆಂಟ್ ಫಾರ್ಮಾ ತನ್ನ ಎಲ್ಲಾ ಸಗಟು ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಸೂಚಿಸಿದೆ. ನವೆಂಬರ್ 9ರಿಂದ ಔಷಧದ ಪ್ಯಾಕ್ ಮೇಲೆ ಮುದ್ರಿಸಿರುವ ಹಳೆಯ ದರ ಮತ್ತು ಪರಿಷ್ಕೃತ ದರಗಳ ಪೈಕಿ ಯಾವುದು ಕಡಿಮೆಯಿದೆಯೋ ಅದನ್ನೇ ಗ್ರಾಹಕರಿಂದ ಪಡೆಯಬೇಕಾಗುತ್ತದೆ. ಈ ಮೂಲಕ ಕ್ಯಾನ್ಸರ್ ಔಷಧಗಳು ರೋಗಿಗಳಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿವೆ.