ಉಡುಪಿ: ಇಲಿ ಜ್ವರವು ಬ್ಯಾಕ್ಟಿರಿಯಾದಿಂದ ಬರುವಂತಹ ಒಂದು ಕಾಯಿಲೆಯಾಗಿದ್ದು, ದೇಹ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಇಲಿ ಜ್ವರವನ್ನು ತಡೆಯಲು ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ವಾಸುದೇವ ಉಪಾಧ್ಯಾಯ ಹೇಳಿದರು.
ಅವರು ಗುರುವಾರ ನಗರದ ಪುತ್ತೂರು ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಉಡುಪಿ, ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಹಾಗೂ ರೋಟರಿ ಕ್ಲಬ್ ಕಲ್ಯಾಣಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಇಲಿ ಜ್ವರದ ಕುರಿತು ಜಾಗೃತಿ ಜಾಥಾ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರಸಭಾ ಸದಸ್ಯೆ ಮಂಜುಳಾ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವ ಖಾಯಿಲೆಯೂ ನಮ್ಮ ಬಳಿ ಬರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಇಲಿ ಜ್ವರ ಬರದಂತೆ ತಡೆಯಬೇಕು ಎಂದರು.
ಇಲಿ ಜ್ವರ ಎಚ್ಚರಿಕೆಯ ಮಾಹಿತಿಯುಳ್ಳ ಕರಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ನಾಮ ನಿರ್ದೇಶಿತ ಸದಸ್ಯ ದಿನೇಶ್ ಪೈ, ಕಲ್ಯಾಣಪುರ ರೋಟರಿ ಕಾರ್ಯದರ್ಶಿ ರೀನಾ ಆನಂದ ಶೆಟ್ಟಿ, ಮಿತ್ರಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ, ರೋಟರಿ ದಿವಾಕರ್, ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೂಸಿ ಸೋಜಾ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.