ಉಡುಪಿ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ-ಪ್ರತಿಭಾ ಪುರಸ್ಕಾರ-ಸಮ್ಮಾನ

ಉಡುಪಿ: ಇಂದು-ನಾಳೆಯ ಆಲೋಚನೆಗಾಗಿ ಪತ್ರಕರ್ತರ ದಿನಾಚರಣೆ ಮಾಡುತ್ತೇವೆಯೇ ಹೊರತು ಪತ್ರಕರ್ತರ ದಿನಾಚರಣೆ ಸೆಲೆಬ್ರೇಶನ್ ಅಲ್ಲ. ಗಾಂಧೀಜಿ ದಿನಾಚರಣೆ, ಅಂಬೇಡ್ಕರ್ ದಿನಾಚರಣೆ ಮಾಡುವಾಗಲೂ ಇದೇ ಯೋಚನೆ ಇರಬೇಕು. ಕೇವಲ ವರ್ಗ, ಜಾತಿಗೆ ಸೀಮಿತವಲ್ಲ. ನಿನ್ನೆ-ಇಂದು-ನಾಳೆಯನ್ನು ಬೆಸೆಯುವುದೇ ದಿನಾಚರಣೆ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್.ಧರ್ಮ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮ ಇಂದು ಅತ್ಯಂತ ದೊಡ್ಡ ಎಂಪ್ಲಾಯ್ ಮೆಂಟ್ ಸೆಕ್ಟರ್ ಆಗಿದೆ. ಅದ್ಭುತ ಲೇಖನಗಳನ್ನು ಪ್ರಕಟಿಸಿ ಆಕರ್ಷಿಸುತ್ತಿದ್ದಾರೆ. ಸಮಸ್ಯೆಗಳತ್ತ ಗಮನ ಸೆಳೆದು ಜಾಗೃತಿ ಮೂಡಿಸುತ್ತಿದ್ದಾರೆ. ಹೃದಯಮುಟ್ಟುವಂತಹ ಲೇಖನಗಳು ಬರುತ್ತಿವೆ ಎಂದರು.
ಪ್ರಮುಖ ಪ್ರಶ್ನೆಗಳನ್ನು ಕೇಳುವಲ್ಲಿ ಮೌನವಾಗಿದ್ದೇವೆ. ಓರ್ವ ಪತ್ರಿಕೆಯಲ್ಲಿ ತನ್ನ ಹೆಸರು ಬರಬಾರದೆಂದು ಭಯಪಡುತ್ತಾನೆಂದರೆ ಪತ್ರಕರ್ತರು ಮೂಲಭೂತವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕಾಗಿ ಪಾರ್ಲಿಮೆಂಟ್ ನಲ್ಲಿ, ಅಸೆಂಬ್ಲಿಯಲ್ಲಿ, ಶಿಕ್ಷಣ ಸಂಸ್ಥೆ ಹೀಗೆ ಎಲ್ಲ ಕಡೆಯೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲಾಗುತ್ತಿದೆ. ಪತ್ರಕರ್ತರ ಪ್ರಶ್ನೆಗಳಿಂದಾಗಿ ದೇಶದಲ್ಲಿ ಒಂದು ವ್ಯವಸ್ಥೆಯಿದೆ. ಇಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಪ್ರಶ್ನಿಸುವವರು ವಿಶೇಷವಾಗಿ ಆಲೋಚನೆ ಮಾಡುತ್ತಾರೆ ಎಂದು ತಿಳಿಸಿದರು.

ಮೈಸೂರು ಸಿಟಿಟುಡೇ ಹಿರಿಯ ಛಾಯಾಗ್ರಾಹಕ ಜಿ.ಕೆ.ಹೆಗಡೆ ಮಾತನಾಡಿ ಪತ್ರಿಕೆಯಲ್ಲಿ ಬರುವ ಬರಹಗಳಷ್ಟೇ ಛಾಯಾಚಿತ್ರವೂ ಪ್ರಮುಖಪಾತ್ರವಹಿಸಲಿದೆ. ಅಷ್ಟೇ ಅಲ್ಲದೆ ಛಾಯಾಚಿತ್ರವೊಂದೇ ಓದುಗನಿಗೆ ಸಂಪೂರ್ಣ ವಿಷಯದ ಅರಿವು ಮೂಡಿಸಲಿದೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳದ ಪತ್ರಿಕಾ ವಿತರಕ ಮೊಹಮ್ಮದ್ ಇಸ್ಮಾಯಿಲ್, 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಕುಲ್ ದಾಸ್ ಪೈ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತ ಉದಯವಾಣಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರನ್ನು ಸಮ್ಮಾನಿಸಲಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಿ ಸಮ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು.
ಅಜಿತ್ ಅರಾಡಿ ಅತಿಥಿ ಪರಿಚಯ ಮಾಡಿದರು. ಮೈಕಲ್ ಸ್ವಾಗತಿಸಿ, ಚೇತನ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಸರಳೇಬೆಟ್ಟು‌ ವಂದಿಸಿದರು.