ಹೆಬ್ರಿಯ ಗಿಲ್ಲಾಳಿಯಲ್ಲಿ ಪೇಜಾವರ ಮಠದ ನಾಲ್ಕನೇ ಗೋಶಾಲೆ ಆರಂಭಿಸಲು ಭರದ ಸಿದ್ಧತೆ

ಉಡುಪಿ: ಗೋರಕ್ಷಣೆಯ ಮೌನಕ್ರಾಂತಿಯನ್ನು ನಡೆಸುತ್ತಿರುವ ಶ್ರೀ ಪೇಜಾವರ ಮಠವು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ತನ್ನ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದೆ.

ಹೆಬ್ರಿಯ ಪ್ರಸಿದ್ಧ ವೈದಿಕ ಮನೆತನವಾಗಿರುವ ರಾಘವೇಂದ್ರ ಆಚಾರ್ಯ ಮತ್ತು ಕುಟುಂಬಸ್ಥರು ದಾನವಾಗಿ ನೀಡಿರುವ 7 ಎಕರೆ ಮತ್ತು ರಾಮಕೃಷ್ಣ ಆಚಾರ್ಯ ಎಂಬವರು ನೀಡಿರುವ 2 ಎಕರೆ ಸೇರಿ ಒಟ್ಟು 9 ಎಕರೆ ಸುಂದರ ಪ್ರಾಕೃತಿಕ ಸೊಬಗಿನ ಭೂಮಿಯಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯನ್ನು ಆರಂಭಿಸಲು ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ಸಂಬಂಧ ಶನಿವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಮುಂದಿನ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಶ್ರೀ ಮಠದ ಗೋವರ್ಧನಗಿರಿ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಉಡುಪಿಯ ನೀಲಾವರ, ಕೊಡವೂರು, ಹೆಬ್ರಿಯ ಕಬ್ಬಿನಾಲೆ ಸಮೀಪದಲ್ಲಿ ಹೀಗೆ ಮೂರು ಗೋಶಾಲೆಗಳು ಅತ್ಯಂತ ಯಶಸ್ವಿಯಾಗಿ ಸಮಾಜದ ಸಹೃದಯರ ಹಾಗೂ ಗೋಪ್ರೇಮಿಗಳ ಸಹಕಾರದೊಂದಿಗೆ ನಡೆಸಲ್ಪಡುತ್ತಿವೆ.

ಈಗ 56ರ ಹರೆಯದ ಶ್ರೀಗಳು ತನ್ನ 60ನೇ ಜನ್ಮವರ್ಧಂತಿಯ ವೇಳೆಗೆ ಒಟ್ಟು 6 ಗೋಶಾಲೆಗಳನ್ನು ಸ್ಥಾಪಿಸಿ ಸಾವಿರಾರು ಗೋವುಗಳಿಗೆ ನೆಮ್ಮದಿಯ ಆಶ್ರಯ ಒದಗಿಸುವ ಕನಸು ಹೊಂದಿದ್ದಾರೆ.

ಭಾನುವಾರ ಹೆಬ್ರಿ ಗಿಲ್ಲಾಳಿಯ ಗೋಶಾಲೆ ಪ್ರಾರಂಭವಾಗುವ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.