2023 ಕ್ಕೆ ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿಗಳು ಏನನ್ನುತ್ತವೆ?

ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನಮ್ಮ ಜಗತ್ತನ್ನು ರೂಪಿಸಿದ ಅಡಾಲ್ಫ್ ಹಿಟ್ಲರ್, ಎರಡನೇ ಮಹಾಯುದ್ದ, ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿ, ಜಾನ್ ಎಫ್ ಕೆನಡಿ ಹತ್ಯೆ ಮತ್ತು ಫ್ರೆಂಚ್ ಕ್ರಾಂತಿಯಂತಹ ಹೆಗ್ಗುರುತಿನ ಘಟನೆಗಳನ್ನು ನಿಖರವಾಗಿ ಊಹಿಸಿದ್ದಾರೆ ಎಂದು ನಂಬಲಾಗಿದೆ. ಡಿಸೆಂಬರ್ 1503 ರಲ್ಲಿ ದಕ್ಷಿಣ ಫ್ರಾನ್ಸ್‌ನ ಸೇಂಟ್ ರೆಮಿ ಡಿ ಪ್ರೊವೆನ್ಸ್‌ನಲ್ಲಿ ಮೈಕೆಲ್ ಡಿ ನಾಸ್ಟ್ರಾಡೇಮ್ ಆಗಿ ಜನಿಸಿದ ಈತ ಜುಲೈ 2, 1566 ರಂದು ನಿಧನರಾದರು. ಇವರು ಬರೆದ ಪುಸ್ತಕ ಲೆಸ್ ಪ್ರೊಫೆಟೀಸ್ ಸರಿಸುಮಾರು 6,338 ಭವಿಷ್ಯವಾಣಿಗಳನ್ನು ಒಳಗೊಂಡಿದ್ದು, ಇವುಗಳಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚು ಭವಿಷ್ಯವಾಣಿಗಳು ನೆರವೇರಿದೆ ಎಂದು ಹೇಳಲಾಗುತ್ತದೆ.

2023 ಕ್ಕೆ ನಾಸ್ಟ್ರಡಾಮಸ್ ನ ಭವಿಷ್ಯವಾಣಿಗಳು

ಮಹಾಯುದ್ದ

2023 ಕ್ಕೆ ಎದ್ದು ಕಾಣುವ ಮೊದಲ ಮುನ್ಸೂಚನೆಗಳಲ್ಲಿ ಒಂದು ‘ಮಹಾ ಯುದ್ಧ’. “ಏಳು ತಿಂಗಳ ಮಹಾಯುದ್ಧ, ದುಷ್ಟತನದಿಂದ ಸತ್ತ ಜನರು. ರೂಯೆನ್, ಎವ್ರೆಕ್ಸ್ ರಾಜನಿಗೆ ಪರಿಣಾಮವಿಲ್ಲ” ಎಂದು ನಾಸ್ಟ್ರಡಾಮಸ್ ಬರೆದಿದ್ದಾರೆ ಎನ್ನಲಾಗಿದೆ. ಇದು ಮೂರನೇ ಮಹಾಯುದ್ದದ ಮುನ್ಸೂಚನೆ ಎಂದು ಕೆಲವರು ಊಹಿಸುತ್ತಾರೆ. ಪ್ರಪಂಚವು ಅಸ್ಥಿರತೆಯಲ್ಲಿದ್ದು ಒಂದೆಡೆ ಉಕ್ರೇನ್ ರಷ್ಯಾ ಯುದ್ದ, ಮತ್ತೊಂದೆಡೆ ಚೀನಾ ಅತಿಕ್ರಮಣ, ಇರಾನ್ ಮತ್ತು ಅಫಘಾನಿಸ್ತಾನದಲ್ಲಿ ನಲ್ಲಿ ನಾಗರಿಕ ಕ್ಷೋಭೆ ಮುಂತಾದವುಗಳು ಮುಂಬರುವ ಯುದ್ದದ ಸೂಚನೆಯಾಗಿರಬಹುದು ಎಂದು ಕೆಲವರು ನಂಬುತ್ತಾರೆ.

ಆಕಾಶ ಬೆಂಕಿ

ನಾಸ್ಟ್ರಾಡಾಮಸ್ “ರಾಜ ಭವನದ ಮೇಲೆ ಆಕಾಶ ಬೆಂಕಿ” ಎಂದು ಭವಿಷ್ಯ ನುಡಿದಿದ್ದಾರೆ. ನಾಗರಿಕತೆಯ ಚಿತಾಭಸ್ಮದಿಂದ ಹೊಸ ವಿಶ್ವ ಕ್ರಮಾಂಕವು ಹೊರಹೊಮ್ಮುತ್ತದೆ ಎಂದು ಇದು ಸೂಚಿಸುತ್ತದೆ ಎಂದು ನಂಬಲಾಗಿದೆ. ನಾಸ್ಟ್ರಾಡಾಮಸ್‌ನ ಇತರ ಅನುಯಾಯಿಗಳು ಇದು “ಸಮಯದ ಅಂತ್ಯ” ಅಥವಾ ಹೊಸ ವಿಶ್ವ ಕ್ರಮಾಂಕದ ಆರಂಭವನ್ನು ಉಲ್ಲೇಖಿಸಬಹುದು ಎಂದು ವ್ಯಾಖ್ಯಾನಿಸುತ್ತಾರೆ.

ಮಂಗಳನ ಮೇಲೆ ಬೆಳಕು

ಫ್ರೆಂಚ್ ಜ್ಯೋತಿಷಿಯು ತನ್ನ ಭವಿಷ್ಯವಾಣಿಯ ಪುಸ್ತಕದಲ್ಲಿ “ಮಂಗಳನ ಮೇಲೆ ಬೆಳಕು ಬೀಳುತ್ತಿದೆ” ಎಂದು ಉಲ್ಲೇಖಿಸಿದ್ದಾರೆ. ಇದನ್ನು ಹಲವರು ಮಂಗಳನ ಅಂಗಳದ ಮೇಲೆ ಮಾನವನ ಪಾದಾರ್ಪಣೆ ಎಂದು ವಿಸಂಕೇತಿಸುತ್ತಾರೆ. 2029 ರ ವೇಳೆಗೆ ಮಾನವ ಮಂಗಳ ಗ್ರಹದ ಮೇಲೆ ಇಳಿಯಲಿದ್ದಾನೆ ಎಂದು ಎಲೋನ್ ಮಸ್ಕ್ ಈಗಾಗಲೇ ಸೂಚಿಸಿದ್ದಾರೆ. ಕೆಲವರು ಇದು ಅದರ ಮುನ್ಸೂಚನೆ ಎನ್ನುತ್ತಾರೆ. ಮತ್ತೆ ಕೆಲವರು ಇದು ಮಂಗಳ ಹಿಮ್ಮುಖ ಚಲನೆ ಎಂದು ವರ್ಣಿಸುತ್ತಾರೆ. ಮಂಗಳನ ಹಿಮ್ಮುಖ ಚಲನೆಯು ಭೂಗ್ರಹದ ಮೇಲೆ ಪರಿಣಾಮವನ್ನು ಬೀರಬಹುದು ಎನ್ನುವುದು ಕೆಲವರ ತರ್ಕ.

ಹೊಸ ಪೋಪ್

2023 ಕ್ಕೆ ನಾಸ್ಟ್ರಾಡಾಮಸ್ ಅವರ ಮುಂದಿನ ಭವಿಷ್ಯವು ಫ್ರಾನ್ಸಿಸ್ ನಂತರ ಬರಲಿರುವ ಹೊಸ ಪೋಪ್ ಬಗ್ಗೆ ಇದೆ ಎನ್ನಲಾಗಿದೆ. ಪೋಪ್ ಫ್ರಾನ್ಸಿಸ್ ಕೊನೆಯ ನೈಜ ಪೋಪ್ ಆಗಿರುತ್ತಾರೆ ಮತ್ತು ಮುಂದಿನ ಪೋಪ್ ಹಗರಣವನ್ನು ಸೃಷ್ಟಿಸುತ್ತಾರೆ ಎಂದು ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

“ಹೋಲಿ ರೋಮನ್ ಚರ್ಚ್ನ ಅಂತಿಮ ಉಪದ್ರವದಲ್ಲಿ, ಪೀಟರ್ ದಿ ರೋಮನ್ ಇರುತ್ತಾರೆ, ಅವರು ಅನೇಕ ಕ್ಲೇಶಗಳ ನಡುವೆ ತನ್ನ ಮಂದೆಯನ್ನು ಮೇಯಿಸುವರು, ಅದರ ನಂತರ ಏಳು ಬೆಟ್ಟಗಳ ನಗರವು ನಾಶವಾಗುವುದು ಮತ್ತು ಭಯಂಕರ ನ್ಯಾಯಾಧೀಶರು ಜನರನ್ನು ನಿರ್ಣಯಿಸುವರು. ಅಂತ್ಯ” ಎಂದು ನಾಸ್ಟ್ರಡಾಮಸ್ ಬರೆದಿದ್ದಾರೆ.

ಜಾಗತಿಕ ತಾಪಮಾನ

2023 ರಲ್ಲಿ ತಾಪಮಾನ ಹೆಚ್ಚಳ ಮತ್ತು ಸಮುದ್ರದ ಮಟ್ಟಗಳು ಹೆಚ್ಚಾಗಬಹುದು ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. “ಸೂರ್ಯನಂತೆ ತಲೆಯು ಹೊಳೆಯುವ ಸಮುದ್ರವನ್ನು ನೋಡುತ್ತದೆ. ಕಪ್ಪು ಸಮುದ್ರದ ಜೀವಂತ ಮೀನುಗಳು ಕುದಿಯುತ್ತವೆ. ರೋಡ್ಸ್ ಮತ್ತು ಜಿನೋವಾ ಅರ್ಧ ಹಸಿವಿನಿಂದ ಬಳಲುತ್ತಿರುವಾಗ ಅವುಗಳನ್ನು ಕತ್ತರಿಸಲು ಸ್ಥಳೀಯ ಜನರು ಶ್ರಮಿಸುತ್ತಾರೆ” ಎಂದಿದ್ದಾರೆ.

ನಾಗರಿಕ ಅಶಾಂತಿ

“ಶೀಘ್ರದಲ್ಲೇ ಮತ್ತು ಕಾಲಾನಂತರದಲ್ಲಿ ದೊಡ್ಡ ಬದಲಾವಣೆಗಳನ್ನು, ಭಯಾನಕ ಗಾಬರಿಗಳು ಮತ್ತು ಪ್ರತೀಕಾರಗಳನ್ನು ನೋಡುತ್ತೀರಿ. ತುತ್ತೂರಿ ದೊಡ್ಡ ಅಪಶ್ರುತಿಯಿಂದ ಅಲುಗಾಡುತ್ತದೆ. ಮುಖವನ್ನು ಸ್ವರ್ಗಕ್ಕೆ ಎತ್ತುತ್ತಾ ಒಪ್ಪಂದವೊಂದು ಮುರಿದುಹೋಗುತ್ತದೆ. ರಕ್ತಸಿಕ್ತ ಬಾಯಿ ರಕ್ತದಲ್ಲಿ ಈಜುತ್ತದೆ; ಹಾಲು ಮತ್ತು ಜೇನುತುಪ್ಪದಿಂದ ಅಭಿಷೇಕಿಸಿದ ಮುಖವು ನೆಲದ ಮೇಲೆ ಬೀಳುತ್ತದೆ” ಎಂದು ಬರೆದಿದ್ದಾರೆ.

ಕುಸಿಯುತ್ತಿರುವ ಆರ್ಥಿಕತೆಯಿಂದಾಗಿ ಗೃಹಯುದ್ದಗಳಾಗಿ ಬಡವರು ಶ್ರೀಮಂತರ ವಿರುದ್ದ ದಂಗೆ ಏಳಬಹುದು ಎನ್ನುವುದು ಇದರ ಹಿಂದಿನ ಮರ್ಮವೆಂದು ಕೆಲವರು ಅಂದಾಜಿಸುತ್ತಾರೆ.

ಹೊಸ ವಿಶ್ವ ಕ್ರಮಾಂಕ

ಎರಡು ಮಹಾನ್ ಶಕ್ತಿಗಳ ಹೊಸ ಮೈತ್ರಿಯ ಬಗ್ಗೆ ನಾಸ್ಟ್ರಡಾಮಸ್ ಉಲ್ಲೇಖಿಸಿದ್ದಾರೆ. ಮೈತ್ರಿಯು ಪ್ರಬಲ ಪುರುಷ ಮತ್ತು ದುರ್ಬಲ ಅಥವಾ ಪುರುಷ ಮತ್ತು ಮಹಿಳಾ ನಾಯಕರ ನಡುವೆ ಸಂಭಾವ್ಯವಾಗಿ ಇರುತ್ತದೆ. ಆದಾಗ್ಯೂ, ಮೈತ್ರಿಯ ಉತ್ತಮ ಪರಿಣಾಮಗಳು ದೀರ್ಘಕಾಲ ಉಳಿಯುವುದಿಲ್ಲ ಎಂದು ಅವರು ಬರೆದಿದ್ದಾರೆ ಎನ್ನಲಾಗಿದೆ.